Advertisement

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

12:28 AM Jan 10, 2025 | Team Udayavani |

ತಿರುಮಲ ತಿರುಪತಿ ದೇವಾಲಯದಲ್ಲಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತ ದುರ್ಘ‌ಟನೆ ಇಡೀ ಭಕ್ತ ಸಮುದಾಯವನ್ನು ದಿಗ್ಭ್ರಮೆಗೀಡು ಮಾಡಿದೆ. ದೇಗುಲದ ಆಡಳಿತ ಮಂಡಳಿಯ ಘೋರ ವೈಫ‌ಲ್ಯದ ಪರಿಣಾಮ ಈ ದುರ್ಘ‌ಟನೆ ಸಂಭವಿಸಿದ್ದು, ವೈಕುಂಠ ದ್ವಾರದ ಮೂಲಕ ತಿಮ್ಮಪ್ಪನ ದರುಶನಕ್ಕಾಗಿ ಅತ್ಯುತ್ಸಾಹದಿಂದಲೇ ಬಂದಿದ್ದ ಭಕ್ತ ಸಮುದಾಯವನ್ನು ಶೋಕದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.

Advertisement

ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಮಾನವಕೃತ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲವಾದರೂ ಈ ಪ್ರಮಾದಗಳಿಂದ ದೇಗುಲಗಳ ಆಡಳಿತ ಮಂಡಳಿಗಳಾಗಲೀ, ಆಯೋಜಕರಾಗಲೀ, ಭಕ್ತರಾಗಲೀ ಪಾಠ ಕಲಿಯದಿರುವುದೇ ಬಲುದೊಡ್ಡ ವಿಪರ್ಯಾಸ.

ಧಾರ್ಮಿಕ ಸ್ಥಳಗಳಲ್ಲಿ ಆಯೋಜಿಸಲಾಗುವ ಉತ್ಸವ, ಸತ್ಸಂಗ, ಮೇಳ, ಸಮಾವೇಶದಂತಹ ಕಾರ್ಯಕ್ರಮಗಳಲ್ಲಿ ನಡೆಯುವ ಇಂತಹ ದುರ್ಘ‌ಟನೆಗಳು ದೇಶಕ್ಕೆ ಕಳಂಕ ಉಂಟುಮಾಡುವ ಜತೆಯಲ್ಲಿ ಭಕ್ತರ ನಂಬಿಕೆ, ಶ್ರದ್ಧೆಯ ಬಗೆಗೂ ಪ್ರಶ್ನೆಗಳು ಮೂಡುವಂತೆ ಮಾಡುತ್ತವೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಇಂತಹ ಕಾರ್ಯಕ್ರಮಗಳ ಆಯೋಜಕರು ಹಾಗೂ ಸಂಘಟಕರು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಜತೆಯಲ್ಲಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಆದ ನಿಯಮಾವಳಿಗಳನ್ನು ಹೊಂದಿದ್ದರೂ ಅವು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿವೆ ಎಂಬುದಕ್ಕೆ ಪ್ರತ್ಯೇಕ ಅಧ್ಯಯನ ಅಥವಾ ಸಮೀಕ್ಷೆ ನಡೆಸುವ ಅಗತ್ಯವಿಲ್ಲ.

ವೈಕುಂಠ ಏಕಾದಶಿಯ ಪ್ರಯುಕ್ತ ತಿರುಪತಿ ದೇಗುಲದಲ್ಲಿ ಸಂಪ್ರದಾಯದಂತೆ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದ್ದು, ಈ ವೇಳೆ ತಿರುಪತಿ ತಿಮ್ಮಪ್ಪನ ದರುಶನ ಪಡೆಯಲು ಭಕ್ತರು ಭಾರೀ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವುದು ಸರ್ವೇಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಟಿಟಿಡಿಯು ಈ ಮೂರು ದಿನಗಳ ಕಾಲ ದೇವರ ದರ್ಶನ ಪಡೆಯಲು ವಿಶೇಷ ಟಿಕೆಟ್‌ ವ್ಯವಸ್ಥೆಯನ್ನು ಮಾಡಿತ್ತು. ಈ ಬಗ್ಗೆ ಆರಂಭದಿಂದಲೇ ಅಪಸ್ವರ ಕೇಳಿ ಬಂದಿತ್ತು. ಅಷ್ಟು ಮಾತ್ರವಲ್ಲದೆ ಈ ಕೇಂದ್ರಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಒಳಪ್ರವೇಶಿಸಲು ಅವಕಾಶ ಕಲ್ಪಿಸಿದ ಕುರಿತಂತೆಯೂ ಈಗ ಟಿಟಿಡಿ ವಿರುದ್ಧ ಆಕ್ರೋಶ ವ್ಯಕ್ತವಾಗತೊಡಗಿದೆ. ಟಿಟಿಡಿ ಅಧಿಕಾರಿಗಳು ಮತ್ತು ಸಿಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆಯಿಂದಾಗಿಯೇ ಈ ದುರಂತ ಸಂಭವಿಸಿರುವುದು ಈಗ ಸ್ಪಷ್ಟವಾಗಿದೆ.

ಸಹಸ್ರಾರು ಸಂಖ್ಯೆಯಲ್ಲಿ ಜನರು ಜಮಾಯಿಸುವ ಬಗ್ಗೆ ಖಚಿತತೆ ಇದ್ದರೂ ಟಿಟಿಡಿ ಇಷ್ಟೊಂದು ಅಸಮರ್ಪಕವಾಗಿ ಟಿಕೆಟ್‌ ನೀಡಿಕೆ ವ್ಯವಸ್ಥೆಯನ್ನು ಕೈಗೊಂಡುದುದರ ಹಿಂದಿನ ಟಿಟಿಡಿಯ ಉದ್ದೆªàಶ ಪ್ರಶ್ನಾರ್ಹ. ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಧಾರ್ಮಿಕ ಸಹಿತ ಯಾವುದೇ ಕಾರ್ಯಕ್ರಮಗಳ ಆಯೋಜನೆ ವೇಳೆ ಸೂಕ್ತ ಮುಂಜಾಗ್ರತ ಕ್ರಮಗಳ ಜತೆಯಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದನ್ನು ಆಯಾಯ ಜಿಲ್ಲಾಡಳಿತಗಳು ಖಾತರಿಪಡಿಸಿಕೊಳ್ಳಬೇಕು. ಇನ್ನು ಜನರು ಕೂಡ ಯಾವುದೋ ಒಂದು ಭಾವನಾತ್ಮಕ ಅಥವಾ ಭಕ್ತಿಯ ಗುಂಗಿನಲ್ಲಿ ತಮ್ಮ ಪ್ರಾಣಕ್ಕೇ ಎರವಾಗಬಲ್ಲಂತಹ ಕಾರ್ಯಕ್ಕೆ ಮುಂದಾಗಬಾರದು. ಜನರು ಇಂತಹ ಜನನಿಬಿಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಒಂದಿಷ್ಟು ವಿವೇಚಿಸಿ, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

Advertisement

ಈ ದುರ್ಘ‌ಟನೆಯಿಂದಾದರೂ ದೇಶದ ಎಲ್ಲ ಯಾತ್ರಾ ಸ್ಥಳಗಳು, ಧಾರ್ಮಿಕ ಕೇಂದ್ರಗಳು ಮತ್ತು ಬೃಹತ್‌ ಕಾರ್ಯಕ್ರಮಗಳ ಆಯೋಜಕರು ಮತ್ತು ಜನರು ಪಾಠ ಕಲಿತು ಯಾತ್ರಾ ಸ್ಥಳಗಳು ಭಕ್ತರ ಪಾಲಿಗೆ ದುರಂತಗಳ ತಾಣಗಳಾಗದಂತೆ ಎಚ್ಚರ ವಹಿಸಲೇಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಅಗತ್ಯ ಸುರಕ್ಷ ಕ್ರಮಗಳನ್ನು ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next