Advertisement
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಬೇಕೆಂಬ ದಿಸೆಯಲ್ಲಿ ಗದಗ ಭಾಗದವರು ವಿಶೇಷ ಪ್ರಯತ್ನಮಾಡಿದ್ದಾರೆ. ಕುಮಾರವ್ಯಾಸ ಅವರು ತಮ್ಮ ಕಾವ್ಯಕ್ಕೆ ಕರ್ನಾಟಕ ಭಾರತ ಕಥಾಮಂಜರಿ ಹೆಸರು ನೀಡಿದ್ದರೆ, ದುರ್ಗಸಿಂಹ ಹಾಗೂ ಆಲೂರು ವೆಂಕಟರಾಯರು ಕರ್ನಾಟಕ ಹೆಸರನ್ನು ಉಲ್ಲೇಖಿಸಿದ್ದಾರೆ. ಜಿಲ್ಲೆಯ ಅಂದಿನ ಪ್ರಮುಖರಾದ ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ, ಎಂ.ಎಂ. ಕಣವಿ, ಸೇರಿ ಹಲವರು ಕರ್ನಾಟಕ ನಾಮಕರಣವಾಗಲು ಶ್ರಮಿಸಿದ್ದಾರೆ.
ದಿ| ಕಾಟನ್ ಸೇಲ್ ಸೊಸೈಟಿ ಆವರಣದ ನೆಲದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ
ಪ್ರಾಮುಖ್ಯತೆ ಪಡೆದಿದೆ. ಅಂದೂ 3 ದಿನ, 3 ಕಡೆ-ಇಂದೂ 3 ದಿನ-3 ಕಡೆ ಕಾರ್ಯಕ್ರಮ:
ಮೈಸೂರು ರಾಜ್ಯಕ್ಕೆ 1973ರ ನ.1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ಹಂಪಿ ಮತ್ತು ಗದುಗಿನಲ್ಲಿ ಕ್ರಮವಾಗಿ ನ. 2 ಮತ್ತು 3ರಂದು ಅದ್ಧೂರಿ ಕಾರ್ಯಕ್ರಮ ನಡೆದು, ಕರ್ನಾಟಕ ನಕ್ಷೆಗೆ ಪೂಜೆ ನೆರವೇರಿಸಲಾಗಿತ್ತು. ಪ್ರಸ್ತುತ “ಕರ್ನಾಟಕ ನಾಮಕರಣ ಸಂಭ್ರಮ-50′ ರ ಆಚರಣೆಗೆ ಅದೇ ಮಾದರಿಯಲ್ಲಿ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Related Articles
Advertisement
ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು 1973ರ ನ. 3ರಂದು ಹಂಪಿಯಿಂದ ಬಂದ ಕನ್ನಡ ಜ್ಯೋತಿಯನ್ನು ವೀರನಾರಾಯಣ ದೇವಸ್ಥಾನದ ಬಳಿ ಸ್ವೀಕರಿಸಿ, ನಾಡದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ನಾಮಕರಣ ಮಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿ ಪಾಲ್ಗೊಂಡಿದ್ದರು.
ಪ್ರಸ್ತುತ 2023ರ ನ. 3ರಂದು “ಕರ್ನಾಟಕ ನಾಮಕರಣ ಸಂಭ್ರಮ-50’ರ ಮೆರವಣಿಗೆಗೆ ಇಂದಿನ ಸಿಎಂ ಸಿದ್ದರಾಮಯ್ಯನವರು ವೀರನಾರಾಯಣ ದೇವಸ್ಥಾನ ಬಳಿ ಹಂಪಿಯಿಂದ ಬಂದ “ಕರ್ನಾಟಕ ಜ್ಯೋತಿ’ ಸ್ವೀಕರಿಸಿ, ನಾಡ ದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮೂಲಕ ಚಾಲನೆ ಸಿಗಲಿದೆ. ಅಲ್ಲಿಂದ ಜಾಮೀಯಾ ಮಸೀದಿ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಭೂಮರಡ್ಡಿ ವೃತ್ತ, ಜನರಲ್ ಕಾರಿಯಪ್ಪ ವೃತ್ತದ ಮೂಲಕ ದಿ. ಗದಗ ಕಾಟನ್ ಸೇಲ್ ಸೊಸೈಟಿ ತಲುಪಲಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳು ಪಾಲ್ಗೊಂಡು ಐವತ್ತು ವರ್ಷಗಳ ಹಿಂದಿನ ದಿನಗಳ ಇತಿಹಾಸ ನೆನಪಿಸಲಿವೆ.
ಮೈಸೂರು ರಾಜ್ಯಕ್ಕೆ “ಕರ್ನಾಟಕ ನಾಮಕರಣ’ ಆದಾಗ ಅಂದು ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಮೈಸೂರಿನವರು. “ಕರ್ನಾಟಕ ನಾಮಕರಣ’ದ ಸುವರ್ಣ ಸಂಭ್ರಮದಲ್ಲಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮೈಸೂರಿನವರೇ ಎಂಬುದು ವಿಶೇಷ.
ಅಂದಾನಪ್ಪ ದೊಡ್ಡಮೇಟಿ ಅವರ ನಂತರ “ಕರ್ನಾಟಕ ನಾಮಕರಣ’ ಬೇಡಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸಿದವರು ಕೆ.ಎಚ್. ಪಾಟೀಲ ಅವರು. “ಕರ್ನಾಟಕ ನಾಮಕರಣ’ ಹೊತ್ತಿನಲ್ಲಿ ಅರಸು ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕೆ.ಎಚ್. ಪಾಟೀಲ ಅವರು ನಾಮಕರಣ ಹರ್ಷೋತ್ಸವದ ಜವಾಬ್ದಾರಿಯ ಪರಿಣಾಮ ಕನ್ನಡದ ಜ್ಯೋತಿಯನ್ನು ಗದುಗಿಗೆ ತಂದಿದ್ದರು. ಇಂದು ಅವರ ಪುತ್ರ, ಎಚ್. ಕೆ. ಪಾಟೀಲ ಅವರು ಅದೇ ಮೈಸೂರಿನವರಾದ ಸಿದ್ದರಾಮಯ್ಯನವರ ಮಂತ್ರಿ ಮಂಡಳದಲ್ಲಿ ಕಾನೂನು ಸಚಿವರಾಗಿದ್ದು, “ಕರ್ನಾಟಕ ನಾಮಕರಣ’ದ ಸುವರ್ಣ ಸಂಭ್ರಮ ಆಚರಣೆ, ಹಿಂದಿನಂತೆ ಇಂದೂ ಗದುಗಿನಲ್ಲಿ ಆಚರಿಸಲು ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಇತಿಹಾಸ ಮರುಕಳಿಸುತ್ತದೆ ಎನ್ನುವುದಕ್ಕೆ ಇದೇ ನಿದರ್ಶನ ಎನ್ನಬಹುದು.
1973ರ ನ. 3ರಂದು ಗದಗನಲ್ಲಿ ಕನ್ನಡ ಜ್ಯೋತಿ ಮೆರವಣಿಗೆ ಆಗಿತ್ತು. ಅಂದಿನ ಸಿಎಂ ಡಿ. ದೇವರಾಜ ಅರಸು ಸರ್ಕಾರದಲ್ಲಿ ಅಂದು ಮಂತ್ರಿಯಾಗಿದ್ದ ಕೆ.ಎಚ್. ಪಾಟೀಲ ಅವರ ಸಾರಥ್ಯದಲ್ಲಿ ಗದುಗಿನಲ್ಲಿ ನಡೆದ ಮೆರವಣಿಗೆಯ ಹಾದಿಯಲ್ಲೇ “ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ’ದ ಮೆರವಣಿಗೆಯೂ ಸಾಗಲಿದೆ ಎಂಬುದು ಈ ಬಾರಿಯ ಮತ್ತೊಂದು ವಿಶೇಷ.
*ಅರುಣಕುಮಾರ ಹಿರೇಮಠ