Advertisement

ಗದಗ:ಅವಳಿ ನಗರದ ಜನತೆಗೆ ತಪ್ಪದ ನೀರಿನ ಬವಣೆ

03:30 PM Jun 03, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ದೇವರು ಕೃಪೆ ತೋರಿ ಮಳೆ ಸುರಿಸಿ ನದಿಗೆ ನೀರು ಹರಿಸಿದರೂ ಅವಳಿ ನಗರದ ಜನತೆಗೆ ನೀರಿನ ಬವಣೆ ತೀರದಂತಾಗಿದೆ. ಅವಳಿ ನಗರಕ್ಕೆ ಕುಡಿವ ನೀರು ಪೂರೈಸುವ ಮುಖ್ಯ ಕೊಳವೆ ಮಾರ್ಗಗಳಲ್ಲೊಂದಾದ ಅಡವಿ ಸೋಮಾಪೂರದ ಗ್ರಾಮದ ಹತ್ತಿರ ಇರುವ ಗದ್ದಿ ಹಳ್ಳದ ಬಳಿ ಮುಖ್ಯ ಕೊಳವೆ ಪೈಪ್‌ ಒಡೆದಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಅವಳಿ ನಗರದ ಜನತೆಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಕಳೆದ ಕೆಲ ತಿಂಗಳಿಂದ ಬರಗಾಲ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ನೀರು ಖಾಲಿಯಾಗಿ ಸಿಂಗಟಾಲೂರ್‌ ಬ್ಯಾರೇಜ್‌ ಡೆಡ್‌ ಸ್ಟೋರೆಜ್‌ ತಲುಪಿದ್ದರಿಂದ ಅವಳಿ ನಗರಕ್ಕೆ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಥಳಿಯ ಸಾರ್ವಜನಿಕರು ನೀರಿಗಾಗಿ ಪರಿತಪಿಸಿದ್ದರು. ಕಳೆದ ಕೆಲ ವಾರಗಳಿಂದ ತುಂಗಭದ್ರಾ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು.

ಇನ್ನೇನು ನದಿಯಲ್ಲಿ ನೀರು ಶೇಖರಣೆಗೊಂಡು ವಾರಕ್ಕೊಮೆಯಾದರೂ ಅವಳಿ ನಗರದ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತದೆ ಎನ್ನುವಷ್ಟರಲ್ಲಿ ಮುಖ್ಯ ಕೊಳವೆ ಪೈಪ್‌ ಒಡೆದಿದ್ದರಿಂದ ಸಮಸ್ಯೆ ಹಾಗೆ ಮುಂದುವರಿದಿದೆ.

ಕಳಪೆ ಮಟ್ಟದ ಪೈಪ್‌ಲೈನ್‌: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್‌ನಿಂದ ಪೈಪ್‌ ಲೈನ್‌ ಮೂಲಕ ಅವಳಿ ನಗರಕ್ಕೆ ತುಂಗಭದ್ರಾ ನದಿ ನೀರು ಪೂರೈಸಲಾಗುತ್ತದೆ. ಆದರೆ ಕಳಪೆ ಮಟ್ಟದ ಪೈಪ್‌ಲೈನ್‌ ಅಳವಡಿಕೆ ಹಿನ್ನೆಲೆಯಲ್ಲಿ ಪ್ರತಿವಾರ ಹಾಗೂ ತಿಂಗಳಿಗೊಮ್ಮೆ ಅಲ್ಲಲ್ಲಿ ಪೈಪ್‌ಲೈನ್‌ ಸೋರಿಕೆ ಕಂಡು ಬರುತ್ತಿತ್ತು. ಕಳೆದ ಕೆಲ ತಿಂಗಳಿಂದ ಪೈಪ್‌ಲೈನ್‌ನಲ್ಲಿ ನೀರು ಪೂರೈಕೆಯಾಗಿರಲಿಲ್ಲ. ಸದ್ಯ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಅವಳಿ ನಗರಕ್ಕೆ ನೀರು ಪೂರೈಸಲು ಪೈಪ್‌ಲೈನ್‌ ಮಾರ್ಗದ ಮೂಲಕ ಪೂರೈಸಲಾಗಿತ್ತು. ನೀರಿನ ಒತ್ತಡದ ಪರಿಣಾಮ ಪೈಪ್‌ಲೈನ್‌ ಸ್ಫೋಟಗೊಂಡು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಸಂಜೆಯಾದರೂ ನೀರಿನ ಹರಿವು ನಿಲ್ಲದಾಗಿದೆ.

ಪೈಪ್‌ಲೈನ್‌ ದುರಸ್ತಿ ಬಹುದೊಡ್ಡ ಸವಾಲು: ಗದಗ- ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುತ್ತಿರುವ ಪೈಪ್‌ ಲೈನ್‌ ಅಡವಿಸೋಮಾಪುರ ಬಳಿಯ ಎರಡು ಕಡೆಗಳಲ್ಲಿ ನೀರು ಸೋರಿಕೆ ಕಂಡು ಬರುತ್ತಿದೆ. ಪೈಪ್‌ಲೈನ್‌ ಒಡೆದ ಸ್ಥಳದಲ್ಲಿ ಶನಿವಾರ ಬೆಳಗ್ಗೆಯಿಂದ ಜೆಸಿಬಿ ಮೂಲಕ ನೀರನ್ನು ಲಿಫ್ಟ್‌ ಮಾಡಲಾಗುತ್ತಿದೆಯಾದರೂ ನೀರಿನ ಹರಿವು ನಿಲ್ಲುತ್ತಿಲ್ಲ. ನೀರಿನ ಹರಿವು ನಿಂತ ನಂತರವೇ ಪೈಪ್‌ಲೈನ್‌ ಯಾವ ಮಟ್ಟದಲ್ಲಿ ಒಡೆದಿದೆ ಎಂಬುದು ತಿಳಿಯಲಿದೆ. ಹೀಗಾಗಿ ಪೈಪ್‌ಲೈನ್‌ ದುರಸ್ತಿ ನಗರಸಭೆ
ಸಿಬ್ಬಂದಿಗೆ ಬಹುದೊಡ್ಡ ಸವಾಲಾಗಿದೆ.

Advertisement

ಪೈಪ್‌ಲೈನ್‌ ದುರಸ್ತಿಗೆ ವೆಲ್ಡ್‌ರ್‌ಗಳೇ ಸಿಗುತ್ತಿಲ್ಲ: ಕಳಪೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಒಂದೆಡೆಯಾದರೆ, ಕಳೆದ ಕೆಲ ವರ್ಷಗಳಿಂದ ಅಲ್ಲಲ್ಲಿ ಸೋರಿಕೆಯಾದ ಪೈಪ್‌ ಲೈನ್‌ಗಳ ದುರಸ್ತಿ ಕೈಗೊಂಡಿದ್ದ ವೆಲ್ಡರ್‌ಗಳಿಗೆ ಸರಿಯಾದ ಸಮಯದಲ್ಲಿ ವೇತನ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ವೆಲ್ಡರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಅಧಿಕಾರಿಗಳು ವೆಲ್ಡರ್‌ಗಳಿಗೆ ಎಷ್ಟೇ ಫೋನ್‌ ಮಾಡಿದರೂ ವೆಲ್ಡರ್‌ಗಳು ಮಾತ್ರ ಫೋನ್‌ ಸ್ವೀಕರಿಸುತ್ತಿಲ್ಲ. ಇದು ಕೂಡ ನಗರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನಗರಸಭೆ ಸಿಬ್ಬಂದಿ ಈಗಾಗಲೇ ಪೈಪ್‌ ಲೈನ್‌ ದುರಸ್ತಿಗಾಗಿ ಕ್ರಮ ಕೈಗೊಂಡಿದ್ದಾರೆ. ಭಾನುವಾರ ಸಂಜೆಯೊಳಗೆ ಪೈಪ್‌ಲೈನ್‌ ರಿಪೇರಿಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಂದೆ ಹೀಗಾಗದಂತೆ ಸರ್ವಪ್ರಯತ್ನ ಮಾಡಲಾಗುತ್ತಿದೆ.
ಪ್ರಶಾಂತ ವರಗಪ್ಪನವರ,
ಪ್ರಭಾರ ಪೌರಾಯುಕ್ತ, ಗದಗ-ಬೆಟಗೇರಿ ನಗರಸಭೆ

ತಿಂಗಳಿಗೆ ನಾಲ್ಕೈದು ಬಾರಿ ಸೋರಿಕೆ
ಗದಗ-ಬೆಟಗೇರಿ ನಗರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದೆ. ಸಿಂಗಟಾಲೂರ್‌ ಬ್ಯಾರೇಜಿನಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ಪೂರೈಕೆಯಾಗುವ ಪೈಪ್‌ಲೈನ್‌ ಕಳಪೆ ಗುಣಮಟ್ಟದ್ದಾಗಿದ್ದ ದ ತಿಂಗಳಿಗೆ ನಾಲ್ಕರಿಂದ ಐದು ಬಾರಿ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡು ಬರುತ್ತದೆ. ಅಧಿಕಾರಿಗಳು ಹೇಗೂ ವೆಲ್ಡರ್‌ಗಳನ್ನು ಹಿಡಿದು ಸೋರಿಕೆಯಾದ ಪೈಪ್‌ಗ್ಳನ್ನು ವೆಲ್ಡಿಂಗ್‌
ಮೂಲಕ ಸರಿಪಡಿಸಿ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ನಗರಸಭೆಯಲ್ಲಿ ವೆಲ್ಡರ್‌ಗಳಿಗೆ ಪಾವತಿಸಬೇಕಾದ ಬಿಲ್‌ ತಡೆಹಿಡಿಯುವುದು, ವಿನಾಕಾರಣ ಮುಂದೂಡುವುದು ಮಾಡುತ್ತಿರುವುದರಿಂದ ವೆಲ್ಡರ್‌ಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಫೋನ್‌ ಮಾಡಿದರೂ ಕೈಗೆ ಸಿಗುತ್ತಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next