ನವದೆಹಲಿ: “ಕೋವಿಡ್ ಅವಧಿಯಲ್ಲಿ ಕಾಂಗ್ರೆಸ್‌ನ “ಜಿ-23′ ನಾಯಕರು ನಾಪತ್ತೆಯಾಗಿದ್ದರು. ಅವರಿಗೆ ಎಲ್ಲವನ್ನೂ ಕೊಟ್ಟಿರುವ ಪಕ್ಷವನ್ನು ಅವರು ನಾಶ ಮಾಡಬಾರದು’ ಎಂಬ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಖರ್ಗೆಯವರ ಮಾತುಗಳ ಬಗ್ಗೆ “ಜಿ-23′ ಗುಂಪಿನಲ್ಲಿ ಗುರುತಿಸಿಕೊಂಡ ಕೆಲವು ನಾಯಕರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ದೂರು ನೀಡಿದ್ದಾರೆ.
“ಮಾತನಾಡುವ ಮುನ್ನ ನೀವು ನೀವು ಸ್ವಲ್ಪ ಯೋಚಿಸಬೇಕು. ನಾವು ರಚನಾತ್ಮಕ ಬದಲಾವಣೆಯನ್ನು ಬಯಸುತ್ತಿದ್ದೇವೆಯೇ ಹೊರತು ಪಕ್ಷದ ಏಳಿಗೆಗೆ ಅಡ್ಡಿಪಡಿಸುವವರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ’ ಎಂದು ಜಿ23 ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಇದನ್ನೂ ಓದಿ:100 ಬಿಲಿಯನ್ ಡಾಲರ್ ಬಂಡವಾಳ ಗಳಿಸಿದ ಇನ್ಫೋಸಿಸ್
ತಿರುವನಂತಪುರ ಸಂಸದ ಶಶಿ ತರೂರ್ ಕೂಡ ಖರ್ಗೆಯವರ ಹೇಳಿಕೆ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಖರ್ಗೆಯವರ ಬಗ್ಗೆ ಅಪಾರ ಗೌರವ ಇದೆ. ನಾವೆಲ್ಲರೂ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿಯೇ ನಿರತರಾಗಿದ್ದೇವೆ. ಈ ಮೂಲಕ ಬಿಜೆಪಿ ವಿರುದ್ಧ ಹೋರಾಡಬೇಕಾಗಿದೆ ಎಂದಿದ್ದಾರೆ.
ಸಂಸದ ಮನೀಶ್ ತಿವಾರಿ ಪ್ರತಿಕ್ರಿಯೆ ನೀಡಿ, “ಮಾಜಿ ಸಚಿವ ಕಪಿಲ್ ಸಿಬಲ್ ಮನೆಯಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚಿಸಲಾಗಿಲ್ಲ. ಸೋಂಕಿನ 1, 2ನೇ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕೆಲಸ ಮಾಡಿದ್ದೇನೆ’ ಎಂದಿದ್ದಾರೆ.