Advertisement

Mangaluru”ಆ್ಯಂಟಿ ಕಮ್ಯುನಲ್‌ ವಿಂಗ್‌’ಗೆ ಮತ್ತಷ್ಟು ಬಲ

12:49 AM Feb 24, 2024 | Team Udayavani |

ಮಂಗಳೂರು: ಪರಸ್ಪರ ಭಿನ್ನ ಧರ್ಮಗಳಿಗೆ ಸೇರಿದ ಯುವಕ-ಯುವತಿ ಜತೆಯಾಗಿದ್ದಾಗ ಪ್ರಶ್ನಿಸುವುದು, ಅವರಿಗೆ ಅಡ್ಡಿಯನ್ನುಂಟು ಮಾಡುವುದು, ಹಲ್ಲೆ ನಡೆಸುವುದು ಮೊದಲಾದ ಘಟನೆಗಳನ್ನು (ನೈತಿಕ ಪೊಲೀಸ್‌ಗಿರಿ) ತಡೆಯುವುದಕ್ಕಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆರಂಭಿಸಲಾಗಿರುವ ಆ್ಯಂಟಿ ಕಮ್ಯುನಲ್‌ ವಿಂಗ್‌(ಎಸಿಡಬ್ಲ್ಯು) ಪುನಾರಚಿಸಲಾಗಿದ್ದು ಮತ್ತಷ್ಟು ಬಲಪಡಿಸಲಾಗಿದೆ.

Advertisement

ಗೃಹ ಸಚಿವ ಡಾ| ಜಿ.ಪರಮೇಶ್ವರ ಅವರ ನಿರ್ದೇಶನದಂತೆ 9 ತಿಂಗಳ ಹಿಂದೆ ರಚಿಸಲಾದ ಈ ಕೋಮು ವಿರೋಧಿ ವಿಭಾಗ (ಎಸಿಡಬ್ಲ್ಯು) ಇದುವರೆಗೆ ಓರ್ವ ಎಸಿಪಿಯವರ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇನ್ನು ಮುಂದೆ ಕಮಿಷನರೆಟ್‌ನ ಮೂರು ಉಪವಿಭಾಗಗಳ ಎಸಿಪಿಗಳು ಕೂಡ ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ. ಮಾತ್ರವಲ್ಲದೆ ಪಿಎಸ್‌ಐ ಸೇರಿದಂತೆ ನಾಲ್ವರು ಪೊಲೀಸ್‌ ಸಿಬಂದಿಯನ್ನೊಳಗೊಂಡ ಪ್ರತ್ಯೇಕ ದಳ ಕಾರ್ಯಾಚರಿಸಲಿದೆ. ಆರಂಭದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಮುಖ್ಯಸ್ಥರಾಗಿದ್ದು ಆರು ಮಂದಿ ಪೊಲೀಸರು ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಎಸಿಡಬ್ಲ್ಯುವಿನ ಬಲ ಹೆಚ್ಚಿಸಲಾಗಿದೆ. ಕಮಿಷನರೆಟ್‌ ವ್ಯಾಪ್ತಿಯ ಪಾರ್ಕ್‌, ಬೀಚ್‌ಗಳು ಸೇರಿದಂತೆ ವಿವಿಧೆಡೆ ಎಸಿಡಬ್ಲೂé ವಿಂಗ್‌ನ ಪ್ರತ್ಯೇಕ ಪೊಲೀಸ್‌ ದಳಗಳು ಕೂಡ ವಿಶೇಷ ನಿಗಾ ವಹಿಸಲಿವೆ.

147 ಮಂದಿ
ವಿರುದ್ಧ ರೌಡಿಶೀಟ್‌
ಕಮಿಷನರೆಟ್‌ ವ್ಯಾಪ್ತಿಯಲ್ಲಿ 2023ರಲ್ಲಿ 7 ನೈತಿಕ ಪೊಲೀಸ್‌ಗಿರಿ ಘಟನೆಗಳು ವರದಿಯಾಗಿದ್ದು 25 ಆರೋಪಿಗಳನ್ನು ಪೊಲೀಸರು ಬಂ ಧಿಸಿದ್ದಾರೆ. 2022ರಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ 15 ಆರೋಪಿಗಳನ್ನು ಬಂಧಿಸಲಾಗಿತ್ತು. 2021ರಲ್ಲಿ ನಡೆದ ಘಟನೆಗಳಲ್ಲಿ 31 ಮಂದಿ ಯುವಕರನ್ನು ಬಂಧಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ನೈತಿಕ ಪೊಲೀಸ್‌ ಗಿರಿ ಮತ್ತು ಕೋಮುಗಲಭೆಗೆ ಸಂಬಂಧಿಸಿದಂತೆ 147 ಮಂದಿ ವಿರುದ್ಧ ರೌಡಿ ಶೀಟ್‌ ತೆರೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೊಸ ಹೆಸರುಗಳು ಸೇರ್ಪಡೆ
ನೈತಿಕ ಪೊಲೀಸ್‌ಗಿರಿ ಘಟನೆಗಳಲ್ಲಿ ಭಾಗಿಯಾಗಿರುವವರು ಹಳೆಯ ಅಪರಾಧಿಗಳಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಹೊಸ ಹೆಸರುಗಳು ಕೇಳಿಬರುತ್ತಿವೆ. ಆರೋಪಿಗಳಲ್ಲಿ ಕೆಲವರು ಮಾತ್ರ ಸಂಘಟನೆಗೆ ಸಂಬಂಧಿಸಿದವರಾಗಿದ್ದಾರೆ. ಇನ್ನು ಕೆಲವರು ಕೆಲವು ಸಂಸ್ಥೆಗಳಿಂದ ಪ್ರಭಾವಿತರಾದವರಿದ್ದಾರೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಶಂಕಿತರ ಮೇಲೆ
ನಿರಂತರ ನಿಗಾ
ಆ್ಯಂಟಿ ಕಮ್ಯುನಲ್‌ ವಿಂಗ್‌ನ್ನು ಬಲಗೊಳಿಸಲಾಗಿದ್ದು ಅದಕ್ಕೆ ಹೆಚ್ಚುವರಿ ಸಿಬಂದಿ ಒದಗಿಸಲಾಗಿದೆ. ಈ ವಿಭಾಗವು ನಗರದಲ್ಲಿ ಈ ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲ ಶಂಕಿತರ ಮೇಲೆಯೂ ನಿರಂತರ ನಿಗಾ ಇರಿಸುತ್ತದೆ. ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಬಗ್ಗೆಯೂ ಪರಿಶೀಲಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳ ಮೇಲೆಯೂ ನಿಗಾ ವಹಿಸಲಿದೆ.
-ಅನುಪಮ್‌ ಅಗರ್‌ವಾಲ್‌,
ಪೊಲೀಸ್‌ ಆಯುಕ್ತರು, ಮಂಗಳೂರು

Advertisement

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next