ಬೆಂಗಳೂರು: ಬಿಜೆಪಿಯ “ನಮ್ಮ ಭೂಮಿ ನಮ್ಮ ಹಕ್ಕು’ ಅಭಿಯಾನವನ್ನು ಆಡಳಿತಾರೂಢ ಕಾಂಗ್ರೆಸ್ ಟೀಕಿಸಿದೆ. ವಕ್ಫ್ ವಿಚಾರ ಇಟ್ಟುಕೊಂಡು ಕೋಮು ಗಲಭೆ ಎಬ್ಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರೆ, ವಕ್ಫ್ ವಿಚಾರವನ್ನು ರಾಜಕೀಯವಾಗಿ ಅಸ್ತ್ರವಾಗಿ ಬಳಸಬಾರದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಶಿವಕುಮಾರ್, ಬಿಜೆಪಿಯದ್ದು ಮೂರ್ಖತನ. ಬಿಜೆಪಿ ಅವಧಿಯಲ್ಲೇ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿದೆ. ನಮ್ಮವರು ತಡವಾಗಿ ಗಮನಿಸಿದ್ದಾರೆ. ಎಲ್ಲಕ್ಕೂ ದಾಖಲೆಗಳಿವೆ. ವಕ್ಫ್ ವಿಚಾರವಾಗಿ ಮುಖ್ಯಮಂತ್ರಿ, ಸಂಬಂಧಿಸಿದ ಮಂತ್ರಿಗಳು ಸ್ಪಷ್ಟನೆ ಕೊಟ್ಟ ಮೇಲೂ ಬಿಜೆಪಿಯವರು ಏನು ಅಭಿಯಾನ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಬಿಜೆಪಿಯವರು ವಕ್ಫ್ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ನಮ್ಮ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಅಂದುಕೊಂಡಿರಬಹುದು. ಸಮಾಜದಲ್ಲಿ ಶಾಂತಿ ಹಾಳು ಮಾಡಲು, ನಮಗೆ ಮತ್ತು ಅಲ್ಪಸಂಖ್ಯಾಕರಿಗೆ ಸ್ಥಳೀಯವಾಗಿ ಮನಸ್ತಾಪ ಬರಲು ಕಾರಣವಾಗುತ್ತಿದ್ದಾರೆ. ಅವರು ಇದಕ್ಕೆಲ್ಲ ಕಾರಣೀಭೂತರಾಗಬಾರದು ಎಂದರು.
ಸಚಿವ ತಂಗಡಗಿ ಆಕ್ರೋಶ
ಸಿದ್ದಾಪುರ: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು ವಿಚಾರದಲ್ಲಿ ಬಿಜೆಪಿಯವರಿಗೆ ಕ್ಯಾಕರಿಸಿ ಉಗಿಯಬೇಕು. ಬಿಜೆಪಿಗರು ಈ ಹಿಂದೆ ತಮ್ಮ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತೇವೆ ಎಂದಿದ್ದರು. ಆಗ ತಲೆಯಲ್ಲಿ ಅವರಿಗೆ ಮಿದುಳಿತ್ತೋ, ಲದ್ದಿಯಿತ್ತೋ ಎಂದು ಸಚಿವ ಶಿವರಾಜ ತಂಗಡಗಿ ಕಿಡಿಕಾರಿದರು.
ಸಿದ್ದಾಪುರದಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೀಬೇಕು ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. ಬಿಜೆಪಿಗರಿಗೆ ಎಂಎಲ್‌ಎ ಸ್ಥಾನ 69ಕ್ಕೆ ಇಳಿಸಿ ಪಾಠ ಕಲಿಸಿದರೂ ನಾಚಿಕೆಯಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದುಡ್ಡು ಕೊಟ್ಟು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು
ಆರೋಪಿಸಿದರು.