Advertisement

ಯಾವುದೇ ಆಚರಣೆ ಇಲ್ಲದೆ ಅಂತ್ಯಕ್ರಿಯೆ

12:46 PM Apr 10, 2018 | |

ಮೈಸೂರು: ವಯೋಸಹಜ ಅನಾರೋಗ್ಯದಿಂದ ನಿಧನರಾದ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ ಹಿರಿಯ ಸಾಹಿತಿ ಪ್ರೊ.ಕೆ.ಪ್ರಭುಶಂಕರ್‌ ಅಂತ್ಯಸಂಸ್ಕಾರ ಸೋಮವಾರ ಯಾವುದೇ ಸಂಪ್ರದಾಯ, ಸಂಪ್ರದಾಯ ಆಚರಣೆಗಳಿಲ್ಲದೆ ನೆರವೇರಿತು.

Advertisement

ಕನ್ನಡ ಸಾರಸ್ವತಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಪ್ರಭುಶಂಕರರ ನಿಧನದ ಹಿನ್ನೆಲೆಯಲ್ಲಿ ಒಂಟಿಕೊಪ್ಪಲಿನ ಶ್ರೀರಾಮಕೃಷ್ಣ ಆಶ್ರಮದ ಸಮೀಪವಿರುವ ಶ್ರೀವರ ವಸತಿ ಸಮುತ್ಛಯದ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು.

ಪ್ರಭುಶಂಕರ ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆ ಧಾರ್ಮಿಕ ಮುಖಂಡರು, ಹಿರಿಯ ವಿದ್ವಾಂಸರು, ಸಾಹಿತಿಗಳು, ಹೋರಾಟಗಾರರು, ರಾಜಕಾರಣಿಗಳು, ಮೃತರ ಅಭಿಮಾನಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮೃತರ ನಿವಾಸಕ್ಕೆ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.

ಪ್ರಮುಖರಿಂದ ಗೌರವ: ಕುವೆಂಪು ಪರಮಶಿಷ್ಯರಾಗಿದ್ದ ಪ್ರಭುಶಂಕರ ಅವರ ನಿಧನದ ಹಿನ್ನೆಲೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮಾನಂದಜೀ ಮಹಾರಾಜ್‌ ಅವರು ಮೃತರ ನಿವಾಸಕ್ಕೆ ಆಗಮಿಸಿ ಅಂತಿಮ ಗೌರವ ಸಲ್ಲಿಸಿದರು.

ಇವರೊಂದಿಗೆ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸಿ, ಹಿರಿಯ ಸಾಹಿತಿಗಳಾದ ಡಾ.ಎಸ್‌.ಎಲ್‌.ಬೈರಪ್ಪ, ಪ್ರೊ.ಕೆ.ಎಸ್‌.ಭಗವಾನ್‌, ಸಿ.ಪಿ.ಕೃಷ್ಣಕುಮಾರ್‌, ಪ್ರಧಾನ ಗುರುದತ್ತ, ಪ್ರೊ.ಅ.ರಾ.ಮಿತ್ರ ಮತ್ತಿತರರು ಮೃತರ ಪಾರ್ಥಿವ ಶರೀರದ ದರ್ಶನ ಪಡೆದರು. 

Advertisement

ಅಲ್ಲದೆ ಪ್ರೊ.ಜಿ.ಎಚ್‌.ನಾಯಕ್‌, ಮೀರಾನಾಯಕ್‌, ಮೈಸೂರು ವಿವಿ ವಿಶ್ರಾಂತ ಕುಲಪತಿಗಳಾದ ಡಾ.ಜೆ.ಶಶಿಧರ್‌ಪ್ರಸಾದ್‌, ಪ್ರೊ.ಕೆ.ಎಸ್‌.ರಂಗಪ್ಪ, ಲೇಖಕ ಡಾ.ಶಿವರಾಂ ಕಾಡನಕುಪ್ಪೆ, ಕನ್ನಡ ಹೋರಾಟಗಾರ ಪ.ಮಲ್ಲೇಶ್‌, ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಮಾದೇಗೌಡ,

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ಪ್ರಧಾನ ಕಾರ್ಯದರ್ಶಿ ಪಿ.ವಿಶ್ವನಾಥ್‌, ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್‌. ವಾಸುದೇವಮೂರ್ತಿ, ರಂಗಕರ್ಮಿ ಕೆ.ಮುದ್ದುಕೃಷ್ಣ ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರು ಹಾಗೂ ಪ್ರಭುಶಂಕರ ಅವರ ಶಿಷ್ಯರು ಅಗಲಿದ ಸಾಹಿತಿಗೆ ಗೌರವ ಸೂಚಿಸಿದರು.

ಮೃತರ ಅಂತ್ಯಸಂಸ್ಕಾರ: ಅಗಲಿದ ಹಿರಿಯ ಸಾಹಿತಿ ಕೆ.ಪ್ರಭುಶಂಕರ ಅವರ ಅಂತಿಮ ದರ್ಶನಕ್ಕಾಗಿ ಅವರ ನಿವಾಸದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ಆಗಮಿಸಿದ ಅನೇಕರು ಅಂತಿಮ ದರ್ಶನ ಪಡೆದರು.

ಬಳಿಕ ಮಧ್ಯಾಹ್ನ 12 ಗಂಟೆ ವೇಳೆಗೆ ಗೋಕುಲಂನ ಚಿರಶಾಂತಿ ಧಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು. ಯಾವುದೇ ಸಂಪ್ರದಾಯಗಳಿಲ್ಲದೆ ನಡೆದ ಅಂತ್ಯಕ್ರಿಯೆಯಲ್ಲಿ ಮೃತರ ಕುಟುಂಬ ಸದಸ್ಯರು, ಸಂಬಂಧಿಕರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಪ್ರೊ.ಕೆ.ಪ್ರಭುಶಂಕರಗೆ ಅಂತಿಮ ವಿದಾಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next