ಕುಣಿಗಲ್: ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಕೋವಿಡ್ 19 ಸೋಂಕಿತ ಮೃತ ವ್ಯಕ್ತಿಯನ್ನು ಸಂಬಂಧಿಕರು, ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ಮಾಡಿದ ಘಟನೆ ತಾಲೂಕಿನ ಎಡಿಯೂರು ಹೋಬಳಿ ತಿಮ್ಮಗೌಡನಪಾಳ್ಯದಲ್ಲಿ ನಡೆದಿದೆ. ಗ್ರಾಮದ 68 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟ ವ್ಯಕ್ತಿ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್‌ನ ಕ್ರಮವನ್ನು ಅನುಸರಿಸಿ ಅಂತ್ಯಸಂಸ್ಕಾರ ಮಾಡದೇ, ಮೃತನ ಸಂಬಂಧಿಕರಿಗೆ ಪಿಪಿಇ ಕಿಟ್ ನೀಡಿ ಅಂತ್ಯಸಂಸ್ಕಾರ ಮಾಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಹಾಗೂ ಆತನ ಪತ್ನಿ ವಾರದ ಹಿಂದೆ ಬೆಂಗಳೂರಿನ ಸಂಬಂಧಿಯ ಶವ ಸಂಸ್ಕಾರಕ್ಕೆ ಹೋಗಿದ್ದು, ಅಲ್ಲಿಂದ ವಾಪಸಾದ ಬಳಿಕ ಕೋವಿಡ್ ತಪಾಸಣೆಗೊಳಗಾದರು.
ಆದರೆ ವರದಿ ಬರುವ ಮುನ್ನವೇ ವೃದ್ಧ ಜೂ.30 ರಂದು ಮೃತಪಟ್ಟಿದ್ದು, ಜು.1 ರಂದು ವರದಿ ಬಂದು ಸೋಂಕು ದೃಢಪಟ್ಟಿದೆ. ಆದರೆ ವರದಿ ಬರುವವರೆಗೂ ಶವವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಳ್ಳದೇ,ಪಿಪಿಇ ಕಿಟ್‌ಗಳನ್ನು ಮೃತನ ಸಂಬಂಧಿಕರಿಗೆ ನೀಡಿ ಶವ ಸಂಸ್ಕಾರ ಮಾಡಿಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ನಿಯಮ ದಂತೆ ಶವ ಸಂಸ್ಕಾರ ಮಾಡಲಾಗಿದೆ. ಇಲಾಖೆ ಯಿಂದ ಯಾವುದೇ ಲೋಪವಾಗಿಲ್ಲ, ಮೃತರ ಹೆಂಡತಿ ಸೇರಿದಂತೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಒಂಬತ್ತು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜನರು ವದಂತಿಗಳಿಗೆ ಕಿವಿಗೊಡಬಾರದು.
-ವಿ.ಆರ್.ವಿಶ್ವನಾಥ್, ತಹಶೀಲ್ದಾರ್
ಅಧಿಕಾರಿಗಳ ಯಡವಟ್ಟಿದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮೃತ ವ್ಯಕ್ತಿಯ ಶವ ಸಂಸ್ಕಾರದ ವೇಳೆ ತಾ. ಆಡಳಿತ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇರಲಿಲ್ಲ. ಮೃತರು ಸಾಯುವ ಮುನ್ನ ಕಗ್ಗೆರೆ, ಗೌಡಗೆರೆ, ಅಮೃತೂರು, ಕುಣಿಗಲ್ ತಾಲೂಕು ಕಚೇರಿ ಸೇರಿದಂತೆ ಹಲವೆಡೆ ಸಂಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ.
-ಲವ, ವಕೀಲ