Advertisement

Pajagudde ಲಾರಿ-ಬೈಕ್‌ ಅಪಘಾತ ಮೃತಪಟ್ಟ ನಾಲ್ವರ ಅಂತಿಮ ಸಂಸ್ಕಾರ

08:19 PM Oct 01, 2024 | Team Udayavani |

ಕಾರ್ಕಳ: ಕಾರ್ಕಳ-ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಾಜಗುಡ್ಡೆ ಬಳಿ ಸೆ. 30ರಂದು ಈಚರ್‌ ಲಾರಿ-ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಸುರೇಶ್‌ ಆಚಾರ್ಯ (35) ಮಕ್ಕಳಾದ ಸಮೀಕ್ಷಾ ( 7) ಸುಶ್ಮಿತಾ (5) ಹಾಗೂ ಸುಶಾಂತ್‌ ( 2) ಅವರ ಅಂತ್ಯಸಂಸ್ಕಾರ ನಲ್ಲೂರಿನ ಕೊಡಪಟ್ಯ ಮನೆಯಲ್ಲಿ ನೂರಾರು ಮಂದಿ ಕಂಬನಿ ಮಿಡಿಯುವುದರೊಂದಿಗೆ ಮಂಗಳವಾರ ನೆರವೇರಿತು.

Advertisement

ಶವವಾಗಿ ಮಲಗಿದ್ದ ಕಂದಮ್ಮಗಳ ಸಹಿತ ನಾಲ್ವರ ಮೃತದೇಹ ಕಂಡು ಅಲ್ಲಿದ್ದವರೆಲ್ಲ ಕಣ್ಣೀರ ಧಾರೆ ಹರಿಸಿದರು. ಅಪಘಾತದಲ್ಲಿ ಇಷ್ಟೊಂದು ಸಂಖ್ಯೆಯ ಬಡ ಜೀವಗಳು ಉಸಿರು ನಿಲ್ಲಿಸಿದಾಗ ಈ ಸಾವು ನ್ಯಾಯವೇ ಎಂಬ ಪ್ರಶ್ನೆ ಎಲ್ಲರ ಬಾಯಲ್ಲಿ ಅಲ್ಲಿ ಕೇಳಿ ಬಂತು.

ದುಃಖದ ಸಹನೆ ಕಟ್ಟೆಯೊಡೆದಿತ್ತು
ನವರಾತ್ರಿ ಪೂಜೆಯ ಹಿನ್ನೆಲೆಯಲ್ಲಿ ಸಂಭ್ರಮ, ನಗುವಿನ ವಾತಾವರಣ ಇರಬೇಕಿದ್ದ ಮನೆಯಲ್ಲಿ ವಿಧಿಯ ಕ್ರೂರ ನರ್ತನದಿಂದ ಆಕ್ರಂದನ, ನರಳಾಟಗಳು ಮುಗಿಲು ಮುಟ್ಟಿತ್ತು. ನಾಲ್ಕು ಮಂದಿಯನ್ನು ಕಳೆದುಕೊಂಡು ಬಂಧುಗಳು, ಮಕ್ಕಳನ್ನು ಅತಿಯಾಗಿ ಇಷ್ಟಪಡುತ್ತಿದ್ದ ಇಳಿವಯಸ್ಸಿನ ಜೀವಗಳ ಸಹನೆ ಕಟ್ಟೆಯೊಡೆದಿತ್ತು. ದುಃಖದ ವಾತಾವರಣ ಮನೆಯಲ್ಲಷ್ಟೆ ಅಲ್ಲ ಇಡೀ ಪರಿಸರದಲ್ಲಿ ಮಡುಗಟ್ಟಿತ್ತು.

ಮನೆಯಿಂದ 2 ಕಿ.ಮೀ. ಅಂತರ
ವೇಣೂರಿನಿಂದ ಸುರೇಶ್‌ ಆಚಾರ್ಯ ದಂಪತಿ ಸಹಿತ ಮಕ್ಕಳಿದ್ದ 5 ಮಂದಿ ಮೂಲ ಮನೆ ನಲ್ಲೂರಿಗೆ ಬರುತ್ತಿದ್ದರು. ಇನ್ನೇನು ಮನೆ ತಲುಪಲು 2 ಕಿ.ಮೀ. ಅಷ್ಟೆ ಉಳಿದಿತ್ತು. ಆದರೆ ಜವರಾಯ ಹೆದ್ದಾರಿಯಲ್ಲೆ ಕಾದು ಕುಳಿತಿದ್ದ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡ.

ಸತತ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ
ಅಪಘಾತ ನಡೆದ ಸೋಮವಾರ ವೇಣೂರಿನಿಂದ ಹೊರಡುವಾಗ ನಲ್ಲೂರಿನ ಮನೆಗೆ ಕರೆ ಮಾಡಿ ನಾವು ಹೊರಟಿದ್ದೇವೆ ಎಂದಿದ್ದರು. ಮನೆಗೆ ಇನ್ನೂ ಯಾಕೆ ತಲುಪಿಲ್ಲ ಎಂದು ಸುರೇಶ್‌ ಆಚಾರ್ಯ ಅವರ ತಾಯಿ ಹಲವು ಬಾರಿ ಸುರೇಶ್‌ ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕಾರ ಆಗುತ್ತಿರಲಿಲ್ಲ. ಇದು ಅಪಘಾತ ನಡೆದ ಅವಧಿಯಾಗಿತ್ತು.

Advertisement

ಅಬ್ಬರಿಸಿದ ಗುಡುಗು, ಮಳೆ
ಅಂತಿಮ ಸಂಸ್ಕಾರದ ವೇಳೆ ಭಾರೀ ಮಳೆಯೊಂದಿಗೆ ಗುಡುಗು, ಮಿಂಚು ಅಬ್ಬರಿಸತೊಡಗಿತ್ತು. ವಿಧಿ-ವಿಧಾನ ನಡೆಸಲು ಮಳೆ ಅಡ್ಡಿಯಾಯಿತು. ಮನೆ ಅಂಗಳಕ್ಕೆ ಟಾರ್ಪಲ್‌ ಹಾಕಲಾಯಿತು. ಚಿತೆಯ ಬಳಿ ತಗಡು ಶೀಟು ಹಾಕಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಳೆಗೆ ಒದ್ದೆಯಾಗಿಕೊಂಡೇ ನಾಲ್ವರ ಅಂತಿಮ ಸಂಸ್ಕಾರ ಮುಗಿಸಲಾಯಿತು.

ಮೃತರ ಹೆತ್ತವರಿಗೆ, ಪತ್ನಿಗೆ ಸಾವಿನ ಸುದ್ದಿ ತಿಳಿದದ್ದೇ ಮರುದಿನ!
ಮೃತ ಸುರೇಶ್‌ ಆಚಾರ್ಯರ ಸಹೋದರ ಮುಂಬಯಿಯಲ್ಲಿದ್ದು, ಅವರು ಆಗಮಿಸುವ ತನಕ ಕಾದು ಬಳಿಕ ಸಂಜೆ 4ರ ವೇಳೆಗೆ ಅಂತಿಮ ವಿಧಿವಿಧಾನಗಳು ನೆರವೇರಿದವು. ನಲ್ಲೂರಿನ ಮನೆಯಲ್ಲಿ ಮೃತರ ತಂದೆ-ತಾಯಿ ಇದ್ದು, ಅವರಿಗೆ ಮಂಗಳವಾರ ಬೆಳಗ್ಗೆ ತನಕವೂ ಮಗ ಮತ್ತು ಮೊಮ್ಮಕ್ಕಳು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದಿರಲಿಲ್ಲ. ಬೆಳಗ್ಗೆ ಬಳಿಕ ಒಂದೇ ಸಮನೆ ಮಕ್ಕಳನ್ನು ಕೇಳಲು ಆರಂಭಿಸಿದ್ದು, ಬಳಿಕ ಅಪಘಾತವಾಗಿದೆ, ಸ್ವಲ್ಪ ಗಂಭೀರವಿದೆ ಎಂದು ಮನೆಯವರು ಹೇಳಿ ಸಮಧಾನಪಡಿಸಿದ್ದರು. ಮಂಗಳವಾರ ಮಧ್ಯಾಹ್ನದ ವೇಳೆಗೆ ಹಿರಿಯ ಜೀವಗಳಿಗೆ ವಿಷಯ ತಿಳಿಸಲಾಯಿತು. ಘಟನೆಯಲ್ಲಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಮೀನಾಕ್ಷಿಯವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಸಂಜೆ ಆ್ಯಂಬುಲೆನ್ಸ್‌ನಲ್ಲಿ ನಾಲ್ಕು ಶವಗಳು ಮನೆ ಅಂಗಳಕ್ಕೆ ಬಂದಾಗಲೇ ಪತ್ನಿಗೆ ಪತಿ, ತನ್ನ ಮೂರು ಮಕ್ಕಳು ಇಹಲೋಕ ತ್ಯಜಿಸಿದ್ದು ಗೊತ್ತಾಗಿತ್ತು. ಮೀನಾಕ್ಷಿ ಅವರ ರೋದನ ಅಲ್ಲಿದ್ದವರ ಹೃದಯವನ್ನು ನಲುಗಿಸಿತ್ತು. ಮೊಮ್ಮಕ್ಕಳನ್ನು ಕಳೆದುಕೊಂಡ ಹಿರಿಯ ಜೀವಗಳು, ಮಕ್ಕಳು ಬೇಕು ಎನ್ನುತ್ತ ಬೊಬ್ಬಿಡುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಅಲ್ಲಿದ್ದ ನೂರಾರು ಮಂದಿಯ ಕಣ್ಣುಗಳು ಕಣ್ಣೀರಿನಲ್ಲಿ ತೇವಗೊಂಡವು. ಬಂಧುಗಳು ಬಿಕ್ಕಿಬಿಕ್ಕಿ ಅಳುತ್ತಿದ್ದರು.

ಹೊರಡುವ ಮುನ್ನ ಕುಣಿದು ಕುಪ್ಪಳಿಸಿದ್ದ ಮಕ್ಕಳು
ನವರಾತ್ರಿ ಪೂಜೆ ಸಡಗರದಲ್ಲಿದ್ದು, ಮಕ್ಕಳು ಖುಷಿಯಿಂದ ಹಬ್ಬ ಆಚರಿಸುವ ತವಕದಲ್ಲಿದ್ದರು. ತಾಯಿ ಮನೆಯಿಂದ ಹೊರಡುವ ಮೊದಲು ಪಕ್ಕದಲ್ಲಿರುವ ಬಂಧುಗಳ ಮನೆಗೆ ತೆರಳಿ ಅಜ್ಜಿ ಮನೆಗೆ ಹೋಗುತ್ತೇವೆ ಎಂದು ಆ ಮನೆಯ ಅಂಗಳದಲ್ಲಿ ಕುಣಿದು ಕುಪ್ಪಳಿಸಿ ಹೊರಟಿದ್ದರು. ಆದರೆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು.

ಮಕ್ಕಳೆಲ್ಲಿ ಎನ್ನುತ್ತ ಕನವರಿಸಿ ಇರುಳು ಕಳೆದ ತಾಯಿ
ಅಪಘಾತದಲ್ಲಿ ಪ್ರಾಣ ಉಳಿಸಿಕೊಂಡು ಗಾಯಗೊಂಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾಕ್ಷಿ ತನ್ನ ಮಕ್ಕಳಿಗಾಗಿ ಹಂಬಲಿಸುತ್ತ ತನ್ನ ಮಗು ಎಲ್ಲಿದೆ? ಯಾರಿಗೆ ಏನಾಗಿದೆ. ಮೊದಲು ಅವರನ್ನು ನನಗೆ ತೋರಿಸಿ ಎಂದು ಕನವರಿಸುತ್ತ ಸೋಮವಾರ ಇರುಳು ಕಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next