ಚಿಕ್ಕೋಡಿ: ಮಹಾರಾಷ್ಟ್ರ ರಾಜಾಪುರ ಬ್ಯಾರೇಜ್ ನಿಂದ ಅಂದಾಜು 800 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿದು ಬಿಟ್ಟಿದೆ.
ಮೇ ತಿಂಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವವುದರಿಂದ ಕೃಷ್ಣಾ ನದಿಯು ಬತ್ತಿ ಹೋಗಿತ್ತು. ನದಿ ನೀರನ್ನು ನಂಬಿಕೊಂಡಿರುವ ಅಥಣಿ ತಾಲೂಕಿನ ಹತ್ತಾರು ಹಳ್ಳಿಯ ಜನರು ಕುಡಿಯಲು ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಇದೀಗ ಕೃಷ್ಣಾ ನದಿಗೆ ನೀರು ಹರಿದು ಬರುತ್ತದೆ. ಆದರೆ ಈ ನೀರು ಅಥಣಿ ತಾಲೂಕಿನ ಹಳ್ಳಿಗೆ ಹೋಗುವುದು ಕಷ್ಟ. ಹೀಗಾಗಿ ಹೆಚ್ಚಿನ ನೀರು ಬಂದರೆ ಮಾತ್ರ ಅಥಣಿ ತಾಲೂಕಿನ ರೈತರ ನೀರಿನ ದಾಹ ತೀರಬಹುದಾಗಿದೆ.
ಅಥಣಿ ಮತ್ತು ರಾಯಬಾಗ ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ಕೃಷ್ಣಾ ನದಿಯು ನೀರಿಲ್ಲದೆ ಬತ್ತಿ ಬರಿದಾಗಿತ್ತು. ಜೂನ್ ಆರಂಭದಲ್ಲಿ ಕೆಲವೊಂದು ಕಡೆಗಳಲ್ಲಿ ಭಾರಿ ಮಳೆ ಸುರಿದಿದೆ. ಹೀಗಾಗಿ ನದಿ ತೀರದಲ್ಲಿ ಕೊಳವೆ ಬಾವಿ ಹೊಂದಿರುವ ರೈತರಿಗೆ ಅನುಕೂಲವಾಗುತ್ತದೆ. ಆದರೆ ಕೊಳವೆ ಬಾವಿ ಇಲ್ಲದ ರೈತರು ನದಿ ನೀರನ್ನೆ ನಂಬಿಕೊಂಡಿದ್ದಾರೆ. ಈಗಾಗಲೇ ರಾಜಾಪುರ ಬ್ಯಾರೇಜ್‌ನಿಂದ ಹರಿದು ಬರುವ ನೀರಿನ ಪ್ರಮಾಣ ಅತಿ ಕಡಿಮೆ ಆಗಿದೆ. ಈ ನೀರು ಚಿಕ್ಕೋಡಿ ತಾಲೂಕಿನ ಹಳ್ಳಿ ದಾಟಿ ಮುಂದೆ ಹೋಗುವುದಿಲ್ಲ, ಕನಿಷ್ಠ 2 ಸಾವಿರ ಕ್ಯುಸೆಕ್ ನೀರು ಬಂದರೆ ಮಾತ್ರ ಅಥಣಿ ತಾಲೂಕಿನವರೆಗೆ ತಲುಪಲು ಸಾಧ್ಯ. ಕಳೆದ ಒಂದು ತಿಂಗಳಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಇದರಿಂದ ಕೃಷ್ಣಾ ನದಿಗೆ ನೀರು ಬಿಡಲು ಸಾಂಗ್ಲಿ ನಗರದಲ್ಲಿ ಸಭೆ ನಿಗದಿ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆ ಮುಂದೂಡಿದೆ. ಆದರೆ ಈಗ ಬರುವ ನೀರಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎನ್ನುತ್ತಾರೆ ಚಿಕ್ಕೋಡಿ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ.
ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಿಂದ ಹೆಚ್ಚಿನ ನೀರು ನದಿಗೆ ಬರುತ್ತದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರಾವರಿ ಇಲಾಖೆ ಅಧಿ ಕಾರಿಗಳು ಮಹಾರಾಷ್ಟ್ರದ ಎಲ್ಲ ಬ್ಯಾರೇಜ್‌ಗಳ ಗೇಟ್‌ಗಳನ್ನು ತೆಗೆದಿರುವುದರಿಂದ ನದಿಗೆ ನೀರು ಬರುತ್ತದೆ. ಆದರೆ ರಾಜ್ಯದ ಪಾಲಿನ ನೀರು ಬರುತ್ತಿಲ್ಲ, ಮತ್ತು ಇದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರಾದ ಸಿ.ಡಿ.ಪಾಟೀಲ ಹೇಳಿದರು.