ಲಕ್ಷ್ಮೇಶ್ವರ: ಸಕಲ ಜೀವರಾಶಿಗಳ ಬದುಕಿಗೆ ಜೀವನಾಧಾರ ಮತ್ತು ಗಂಗಾಮಾತೆಯ ಸ್ವರೂಪವಾದ ಜೀವಜಲವನ್ನು ಪಾವಿತ್ರ್ಯತೆಯಿಂದ ಪೂಜಿಸುವುದು, ಮೈದುಂಬಿರುವ ನದಿ, ಕೆರೆ-ಕಟ್ಟೆಗಳಿಗೆ ಬಾಗಿನ ಸಮರ್ಪಿಸುವುದು ಈ ನೆಲದ ಸಂಸ್ಕೃತಿ, ಸಂಪ್ರದಾಯ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ನೂರಾರು ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ದೊಡ್ಡದಾದ (214 ಎಕರೆ) ಶೆಟ್ಟಿಕೆರೆ ಬಹಳ ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು.
ಮನುಷ್ಯ ಸೇರಿ ಪ್ರಾಣಿ-ಪಕ್ಷಿಗಳಿಗೆ ಜೀವಜಲವಾದ ನೀರು ಅತ್ಯಮೂಲ್ಯ ಪ್ರಾಕೃತಿಕ ಸಂಪತ್ತಾಗಿದೆ. ಕೆರೆ-ಕಟ್ಟೆಗಳ ನಿರ್ಮಾಣಕ್ಕಾಗಿ ಹಿರಿಯರು ಶ್ರಮ, ತ್ಯಾಗ, ಬಲಿದಾನ ಮಾಡಿದ್ದಾರೆ. ಅಮೂಲ್ಯವಾದ ಜಲ ಸಂಪನ್ಮೂಲಗಳಾದ ಕೆರೆ, ಹಳ್ಳ, ನದಿಗಳ ಸಂರಕ್ಷಣೆಯ ಜತೆಗೆ ಅವುಗಳನ್ನು ಅತ್ಯಂತ ಗೌರವ, ಪೂಜ್ಯನೀಯ ಭಾವನೆಯಿಂದ ಕಾಣಬೇಕು. ಈ ಭಾವನೆಯನ್ನು ಪ್ರತಿಯೊಬ್ಬರು ಹೊಂದುವ ಮೂಲಕ ಹಿರಿಯರು ಹಾಕಿಕೊಟ್ಟ ಗಂಗಾಪೂಜೆ, ಬಾಗಿನ ಸಮರ್ಪಣೆಯ ಸಂಪ್ರದಾಯವನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಬೇಕು ಎಂದರು.
ಕೆರೆ ಅಭಿವೃದ್ಧಿಗೆ ಆಗ್ರಹ: ಜಿಲ್ಲೆಯಲ್ಲಿಯೇ ದೊಡ್ಡದಾದ(214 ಎಕರೆ) ಈ ಐತಿಹಾಸಿಕ ಕೆರೆ ಈ ಭಾಗದ ಅತ್ಯಮೂಲ್ಯ ಸಂಪತ್ತಾಗಿದೆ. ಸುತ್ತಲೂ ಗುಡ್ಡಗಾಡು, ಅರಣ್ಯ ಪ್ರದೇಶವಿದ್ದು, ಈ ಭಾಗದ ಹತ್ತಾರು ಗ್ರಾಮಗಳ ಜನ-ಜಾನುವಾರು, ಸಾವಿರಾರು ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿದೆ. ಅತ್ಯಂತ ವಿಶಾಲ ಮತ್ತು ನಯಮಮನೋಹರವಾದ ಈ ಕೆರೆ ಅಭಿವೃದ್ಧಿಪಡಿಸಿದರೆ ಈ ಭಾಗದ ಪ್ರೇಕ್ಷಣೀಯ ತಾಣವಾಗಲಿದೆ.
ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಾರಲ್ಲದೇ ಬರಗಾಲದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಗೋಶಾಲೆ ನಿರ್ಮಿಸಲಾಗುತ್ತದೆ. ಪ್ರತಿ ವರ್ಷ ಚಳಿಗಾಲದಲ್ಲಿ ಮಾಗಡಿ ಪಕ್ಷಿಧಾಮಕ್ಕೆ ಬರುವ ಸಾವಿರಾರು ವಿದೇಶಿ ಪಕ್ಷಿಗಳು ಕಳೆದ ಕೆಲ ವರ್ಷಗಳಿಂದ ಈ ಕೆರೆಯಲ್ಲಿ ಬಿಡಾರ ಹೂಡುತ್ತಿವೆ. ಈ ಕೆರೆಗೆ ನದಿಯಿಂದ ನೀರು ತುಂಬಿಸುವ ಯೋಜನೆಯಿಂದ ನೀರು ತುಂಬಿಸುವ ಕಾರ್ಯವೂ ಪ್ರಗತಿ ಹಂತದಲ್ಲಿದೆ. ಆದರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಯ ಅಭಿವೃದ್ಧಿಗೆ ಇದುವರೆಗೂ ಯಾವುದೇ ಜನಪ್ರತಿನಿಧಿ , ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸಿಲ್ಲ. ಆದ್ದರಿಂದ ಶಾಸಕರ ಸ್ವಗ್ರಾಮಕ್ಕೆ ಹೊಂದಿಕೊಂಡಿರುವ ಈ ಕೆರೆಯ ಅಭಿವೃದ್ಧಿಗಾಗಿ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಸಮಾಜದ ಹಿರಿಯರಾದ ಚಂಬಣ್ಣ ಬಾಳಿಕಾಯಿ, ದೇವಣ್ಣ ಬಳಿಗಾರ, ಸುರೇಶ ರಾಚನಾಯಕರ, ಶಿವನಗೌಡ ಅಡರಕಟ್ಟಿ, ಬಸಣ್ಣ ಬಾಳಿಕಾಯಿ, ಮಲ್ಲನಗೌಡ ಪಾಟೀಲ, ರುದ್ರಪ್ಪ ಉಮಚಗಿ, ಎಸ್.ಎಫ್.ಆದಿ, ಸೋಮು ಚಿಕ್ಕತೋಟದ, ಶಿವಾನಂದ ಬನ್ನಿಮಟ್ಟಿ, ಪ್ರಭಣ್ಣ ಮುಳಗುಂದ, ದೇವಪ್ಪ ಅಂಗಡಿ, ಫಕೀರಪ್ಪ ಸಾಗರ, ನೇತ್ರ ಚಿಕ್ಕತೋಟದ, ಸರೋಜವ್ವ ಮಾಗಡಿ, ಲಲಿತಾ ಕೆರಿಮನಿ, ಶಾರದಾ ಮಹಾಂತಶೆಟ್ಟರ, ಅನ್ನಪೂರ್ಣ ಮಹಾಂತಶೆಟ್ಟರ, ಶೈಲಾ ಆದಿ, ಅನ್ನಪೂರ್ಣ ಬಾಳಿಕಾಯಿ, ಶಕುಂತಲಾ ಹೊರಟ್ಟಿ ಸೇರಿ ಶೆಟ್ಟಿಕೆರಿ, ಬಸಾಪುರ, ಕುಂದ್ರಳ್ಳಿ, ಯಲ್ಲಾಪುರ, ಬಾಲೆಹೊಸೂರು ಹಾಗೂ ಗೊಜನೂರು ಗ್ರಾಮದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.