ಮೈಸೂರು: ಕೈಗಾರಿಕೆಗಳ ಬೆಳೆವಣಿಗೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮಾ.4 ಮತ್ತು 5ರಂದು ಮೈಸೂರು ಎಂಎಸ್‌ಎಂಇ ಎಕ್ಸ್‌ಪೋ-2017 4ನೇ ರಾಷ್ಟ್ರೀಯ ವೆಂಡರ್ ಡೆವಲಪ್‌ಮೆಂಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರೂ ಆದ ಶಾಸಕ ವಾಸು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರದಲ್ಲಿನ ಉದ್ಯಮಶೀಲ ಪ್ರೇರಣೆ, ಕೈಗಾರಿಕಾ ಮಾಹಿತಿ, ಸರಕು ಹಾಗೂ ಸೇವಾ ತೆರಿಗೆ ಸೇರಿದಂತೆ ಹಲವು ವಿಷಯಗಳನ್ನು ಕೇಂದ್ರೀಕರಿಸಿ, ಕೈಗಾರಿಕೆಗಳನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಹಕಾರ ನೀಡುತ್ತಿವೆ. ಸರ್ಕಾರದ ಯೋಜನೆಗಳು ಹಾಗೂ ಕೈಗಾರಿಕೆಗಳಲ್ಲಿ ಕಂಡುಬರುತ್ತಿರುವ ಪ್ರಸ್ತುತ ಸವಾಲುಗಳ ಕುರಿತು ಎಕ್ಸ್‌ಪೋದಲ್ಲಿ ಬೆಳಕು ಚೆಲ್ಲಲಾಗುವುದು. ಈ ಬಾರಿಯ ಎಕ್ಸ್‌ಪೋದಲ್ಲಿ ಸಿಡಿº, ಎಚ್‌ಎಎಲ್, ಬಿಇಎಂಎಲ್, ರೈಲ್ವೆ, ಜೆ.ಕೆ.ಟೈರ್, ಆಟೋಮೊಟಿವ್ ಆಕ್ಸೆಲ್, ರಾಣೆ ಮದ್ರಾಸ್ ಸೇರಿದಂತೆ ಹಲವು ಸಣ್ಣ ಕೈಗಾರಿಕೆಗಳು ಸಹ ಭಾಗವಹಿಸಿಲಿವೆ ಎಂದು ಹೇಳಿದರು.
ಸಂಬಂಧ ವೃದ್ಧಿಗೆ ಎಕ್ಸ್‌ಪೋ ಸಹಕಾರಿ: ಜಾಗತಿಕ ಕೈಗಾರಿಕಾ ಹಿನ್ನಡೆ ಹಾಗೂ ನೋಟು ಅಮಾನ್ಯದ ಪ್ರಭಾವದಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಖರೀದಿದಾರರು ಮತ್ತು ಸರಬರಾಜುದಾರರ ನಡುವಿವ ಸಂಬಂಧ ವೃದ್ಧಿಗೆ ಈ ಎಕ್ಸ್‌ಪೋ ಸಹಕಾರಿಯಾಗಿಲಿದೆ. ಇನ್ನೂ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಜಿಡಿಪಿ ಕುರಿತು ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ.
ಉದ್ಯಮಿಗಳು ಸ್ಥಳದಲ್ಲಿಯೇ ವ್ಯಾಟ್‌ನಿಂದ ಜಿಎಸ್‌ಟಿಗೆ ವರ್ಗಾಹಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಕೈಗಾರಿಕಾ ಸಂಘದ ಉಪಾಧ್ಯಕ್ಷ ಉಮೇಶ್ ಶೆಣೈ, ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಇನ್ನಿತರರು ಹಾಜರಿದ್ದರು.
ಇಂದು ಉದ್ಘಾಟನೆ: ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಆವರಣದಲ್ಲಿ ನಡೆಯುವ ಮೈಸೂರು ಎಂ.ಎಸ್.ಎಂ.ಇ ಎಕ್ಸ್‌ಪೋಗೆ ಶನಿವಾರ ಚಾಲನೆ ದೊರೆಯಲಿದೆ. ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಕೆ.ಸೋಮಶೇಖರ್ ಭಾಗವಹಿಸಲಿದ್ದಾರೆ.
ಎರಡು ದಿನಗಳ ಈ ಎಕ್ಸ್‌ಪೋಗೆ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ, ಮೈಸೂರು ಕೈಗಾರಿಕೆಗಳ ಸಂಘ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಕೈಜೋಡಿಸಿವೆ ಎಂದರು.