Advertisement

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

01:25 AM Nov 15, 2024 | Team Udayavani |

ಕಡಬ: ಕೊಯಿಲ ಗ್ರಾಮ ಪಂಚಾಯತ್‌ ಅಧೀನದಲ್ಲಿರುವ ವಾಣಿಜ್ಯ ಕಟ್ಟಡದ ವಿದ್ಯುತ್‌ ಸಂಪರ್ಕದ ಮೀಟರ್‌ ಪೆಟ್ಟಿಗೆಯಲ್ಲಿ ತಡರಾತ್ರಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ವಿದ್ಯುತ್‌ ಮೀಟರ್‌ ಪೆಟ್ಟಿಗೆ ಉರಿಯಲಾರಂಭಿಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ಬೆಂಕಿ ಅವಘಡವೊಂದು ತಪ್ಪಿದಂತಾಗಿದೆ.

Advertisement

ವಾಣಿಜ್ಯ ಮಳಿಗೆಯಲ್ಲಿ ಪೈಂಟ್‌ ಅಂಗಡಿ ಸೇರಿದಂತೆ 4 ಅಂಗಡಿಗಳಿದ್ದು, ಅವುಗಳಿಗೆ ವಿದ್ಯುತ್‌ ಸಂಪರ್ಕದ ಮೀಟರ್‌ ಹೊರಗಡೆ ಗೋಡೆಯಲ್ಲಿ ಅಳವಡಿಸಲಾಗಿದ್ದು, ಅದರಲ್ಲಿ ಬೆಂಕಿ ಉರಿಯಲಾರಂಭಿಸಿ ಕಟ್ಟಡದ ಸುತ್ತ ಹೊಗೆಯಾಡತೊಡಗಿತ್ತು. ರಾತ್ರಿ 3 ಗಂಟೆಯ ಹೊತ್ತಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಮಂದಿ ಅದನ್ನು ಗಮನಿಸಿ ಅಂಗಡಿ ಪಕ್ಕದವರಿಗೆ ಮತ್ತು ಅಂಗಡಿ ಮಾ‚ಲಕರಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಅಂಗಡಿ ಕಟ್ಟಡದ ಹತ್ತಿರದ ನಿವಾಸಿ ಪುರುಷೋತ್ತಮ ಮತ್ತು ಅಂಗಡಿ ಮಾ‚ಲಕ ಹಂಝ ಮತ್ತು ಅವರ ಸಹೋದರರು ಸ್ಥಳಕ್ಕೆ ಆಗಮಿಸಿ ಉರಿಯುತ್ತಿದ್ದ ಮೀಟರ್‌ ಪೆಟ್ಟಿಗೆಯ ಬೆಂಕಿಯನ್ನು ನಂದಿಸಿದರು.

ಸುದ್ದಿ ತಿಳಿದ ಮೆಸ್ಕಾಂ ಸಿಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್‌ ಕಂಬದಿಂದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದರು. ಮೀಟರ್‌ನಿಂದ ವೈರ್‌ ಮೂಲಕ ಅಂಗಡಿಯ ಒಳಗಡೆಗೆ ಬೆಂಕಿ ಆವರಿಸಲು ಆರಂಭಿಸಿ ಹೊಗೆಯಾಡತೊಡಗಿತ್ತು. ಸ್ಥಳೀಯ ನಿವಾಸಿ ಪುರುಷೋತ್ತಮ ಅವರು ಪೈಪ್‌ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು, ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಪ್ಪಿದ ಭಾರೀ ಅವಘಡ
ಬೆಂಕಿ ಹೊತ್ತಿಕೊಂಡಿರುವ ಕಟ್ಟಡದ ಒಂದು ಭಾಗದ 2 ಕೊಠಡಿಯಲ್ಲಿ ಪೈಂಟ್‌, ಕೃಷಿಕರಿಗೆ ಸಂಬಂಧಿಸಿದ ಪ್ಲಾಸ್ಟಿಕ್‌ ವಸ್ತುಗಳು, ಇನ್ನೆರಡು ಕೊಠಡಿಯಲ್ಲಿ ದಿನಸಿ ಅಂಗಡಿಗಳು ಇದ್ದು, ಬಹು ಬೇಗನೇ ಬೆಂಕಿ ಹರಡುವ ಸಾಧ್ಯತೆ ಇತ್ತು. ಆದರೆ ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ ಎಂದು ಪೈಂಟ್‌ ಅಂಗಡಿಯ ಅರಫ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next