Advertisement

ಜಿಎಸ್‌ಟಿಯಿಂದ ರಾಜ್ಯದಲ್ಲಿ  ಜವಳಿಗೂ ಬರ

03:30 AM Jul 17, 2017 | Harsha Rao |

ಶಿವಮೊಗ್ಗ: ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೊಳಿಸಿದ ನಂತರ ಜವಳಿ ಕ್ಷೇತ್ರದ ಅನಿರ್ದಿಷ್ಟಾವಧಿ ಮುಷ್ಕರದಿಂದ ರಾಜ್ಯದಲ್ಲೀಗ ಸಿದ್ಧ ಉಡುಪು ಮತ್ತು ಜವಳಿಯ ಬರ ಎದುರಾಗಿದೆ. ಉತ್ಪಾದಕರು- ಸರ್ಕಾರದ ಸಂಘರ್ಷದಿಂದ ಜವಳಿ
ಮಾರಾಟ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಇದರ ನಡುವೆಯೇ “ಈ ಮುಷ್ಕರದ ಹಿಂದಿನ ನೈಜ ಉದ್ದೇಶ ತೆರಿಗೆ ಎಷ್ಟು ಎಂಬುದಲ್ಲ, ಬದಲಾಗಿ ಬೇರೆಯದೇ ಇದೆ’ ಎಂಬ ಸಂಶಯ ಇಲಾಖಾ ವಲಯದಲ್ಲಿದ್ದು, ಇದಕ್ಕಾಗಿಯೇ ಕೇಂದ್ರ ಸರ್ಕಾರ ಕೂಡ ಬಿಗಿಪಟ್ಟು ಅನುಸರಿಸುತ್ತಿದೆ.

Advertisement

ನೂತನ ಜಿಎಸ್‌ಟಿ ಅಡಿ ಜವಳಿ ಕ್ಷೇತ್ರಕ್ಕೆ ಶೇ. 5 ಮತ್ತು ಶೇ.12 ರಷ್ಟು ತೆರಿಗೆ ವಿಧಿಸಲಾಗಿದ್ದು, ಇದನ್ನು ವಿರೋಧಿಸಿ ಜವಳಿ ಉತ್ಪಾದಕರು ಮೀರತ್‌, ಸೂರತ್‌, ಅಹಮದಾಬಾದ್‌ ಹಾಗೂ ಇನ್ನಿತರ ಕಡೆಗಳಲ್ಲಿ ಜು.1 ರಿಂದ ಆರಂಭಿಸಿದ ಮುಷ್ಕರ ಇದುವರೆಗೂ ಅಂತ್ಯವಾಗಿಲ್ಲ. ಹೀಗಾಗಿ ರಾಜ್ಯಾದ್ಯಂತ ಸಿದ್ಧ ಉಡುಪು ಹಾಗೂ ಜವಳಿ ಪೂರೈಕೆ ಆಗುತ್ತಿಲ್ಲ.
ಜವಳಿ ಉತ್ಪಾದಕರು ದೇಶಾದ್ಯಂತ ಅನಿರ್ದಿಷ್ಟ ಮುಷ್ಕರ ಆರಂಭಿಸಿರುವುದರಿಂದಾಗಿ ಡ್ರೆಸ್‌ಮೆಟೀರಿಯಲ್ಸ್‌ ಸೇರಿ ಸೀರೆ, ವಿವಿಧ ಬಗೆಯ ಬಟ್ಟೆ, ಸೊಳ್ಳೆ ಪರದೆ, ಪಾಪ್ಲಿನ್‌ ಬಟ್ಟೆ ಸೇರಿ ಯಾವುದೇ ಸಿದ್ಧ ಉಡುಪು 15 ದಿನದಿಂದ ರಾಜ್ಯದ ಬಹುತೇಕ ಕಡೆ ಪೂರೈಕೆಯಾಗುತ್ತಿಲ್ಲ. ಜವಳಿ ಉತ್ಪಾದಕರು 12ಕ್ಕಿಂತಲೂ ಹೆಚ್ಚಿನ ಉದ್ದೇಶಗಳಿಗಾಗಿ ಬಳಸುವ ಬಟ್ಟೆ ಇನ್ನಿತರೆ ವಸ್ತುಗಳ ಉತ್ಪಾದನೆ ಮತ್ತು ಸರಬರಾಜು ನಿಲ್ಲಿಸಿದ್ದಾರೆ. ಮುಷ್ಕರ ಆರಂಭವಾಗಿ 15 ದಿನ ಕಳೆದರೂ ಸರ್ಕಾರವಾಗಲಿ, ಜಿಎಸ್‌ಟಿ ಮಂಡಳಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಸಂಧಾನ ಸಭೆಯೂ ನಡೆಯುತ್ತಿಲ್ಲ.

ಜವಳಿ ಉತ್ಪಾದಕರೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಕೆಲವೇ ದಿನಗಳಲ್ಲಿ ಆಷಾಢ ಮುಗಿದು ಶ್ರಾವಣ ಆರಂಭಗೊಳ್ಳುತ್ತದೆ. ಹಬ್ಬದ ಸಾಲು ಶುರುವಾಗುತ್ತದೆ. ಆಗ ಮಾಲೇ ಇಲ್ಲದೆ ಹೇಗೆ ವ್ಯಾಪಾರ ಮಾಡುವುದು ಎಂಬ ವ್ಯಾಪಾರಸ್ಥರ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವುದು ಕಷ್ಟ.

ಈ ಹಿಂದೆ ಬ್ರಾಂಡೆಂಡ್‌ ಸಿದ್ಧ ಉಡುಪಿಗೆ ಶೇ. 5ರಷ್ಟು ವ್ಯಾಟ್‌ ಇದ್ದರೆ, ಉಳಿದ ಯಾವುದೇ ಜವಳಿಗೆ ತೆರಿಗೆ ಇರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ತೆರಿಗೆ ವಿಧಿಸಿರುವುದು ಈ ಉದ್ಯಮಕ್ಕೆ ಹೊಡೆತ ನೀಡಲಿದೆ ಎಂಬುದು ಮೇಲ್ನೋಟದ ಮಾತು. ತೆರಿಗೆ ಇಲ್ಲದೆ ಇರುವುದರಿಂದ ವಾಣಿಜ್ಯ ತೆರಿಗೆ ಇಲಾಖೆ ಇವರ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ.

ಮುಷ್ಕರದ ಹಿಂದಿನ ವಾಸ್ತವ ಬೇರೆ: ಆದರೆ ಉದ್ಯಮದ ಮೂಲಗಳೇ ಹೇಳುವ ಪ್ರಕಾರ, ಇಡೀ ಜವಳಿ ಉದ್ಯಮ ತೆರಿಗೆಯ ಹೊರತಾದ ವಹಿವಾಟು ಲೋಕದಲ್ಲಿ ಇದೆ. ಬಹುತೇಕ ಯಾವುದೇ ಉತ್ಪಾದಕರು ಬಿಲ್‌ ಮೂಲಕ ಜವಳಿ ಮಾಲನ್ನು ಕಳುಹಿಸುತ್ತಲೇ ಇರಲಿಲ್ಲ. ಮಾರುಕಟ್ಟೆಯ ಡೀಲರ್‌ಗಳು ಕೂಡ ಬಿಲ್‌ ಇಲ್ಲದೇ ವ್ಯವಹಾರ ನಡೆಸುತ್ತಿದ್ದರು. ಆದರೆ ಇದೀಗ ಏಕಾಏಕಿ ತೆರಿಗೆ ವಿಧಿಸಿರುವುದು ಇಡೀ ಉದ್ಯಮಕ್ಕೆ ನುಂಗಲಾರದ ತುತ್ತಾಗಿದೆ. ಇದೇ ಕಾರಣಕ್ಕೆ ಮುಷ್ಕರ ನಡೆಯುತ್ತಿದೆ. ಈ ಸತ್ಯವನ್ನು ಅರಿತಿರುವುದರಿಂದಲೇ ಇಲಾಖೆಯಾಗಲಿ, ಕೇಂದ್ರ ಸರ್ಕಾರವಾಗಲಿ ಇವರ ಜತೆ ಮಾತುಕತೆಗೆ ಮುಂದಾಗಿಲ್ಲ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಉತ್ಪಾದಕರಿಂದ ಗ್ರಾಹಕರವರೆಗೆ ಟ್ರಾಕಿಂಗ್‌ ವ್ಯವಸ್ಥೆ ಇದ್ದು,
ಯಾರ್ಯಾರು ಯಾವ ರೀತಿ ವಹಿವಾಟು ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಈ ಸತ್ಯವನ್ನು ಅರಿತೇ ಉದ್ಯಮ ಕಂಗಾಲಾಗಿದೆ. ಕನಿಷ್ಠ ಶೇ. 5 ರಷ್ಟು ತೆರಿಗೆ ವಿಧಿಸಿರುವುದರಿಂದ ಪ್ರತಿ ವಸ್ತು ಮಾರಾಟಕ್ಕೂ ಜಿಎಸ್‌ಟಿ ಬಿಲ್‌ ಹಾಕಲೇಬೇಕು. ಇದು ತೆರಿಗೆ ತಪ್ಪಿಸುತ್ತಿದ್ದವರನ್ನು ಸಿಕ್ಕಿ ಹಾಕಿಸಲಿದೆ. ಇದೇ ಮುಷ್ಕರದ ಹಿಂದಿನ ಕಾರಣ.

Advertisement

ಜಿಎಸ್‌ಟಿ ಕರಾಮತ್ತು
ಮತ್ತೂಂದೆಡೆ, ಬೇರೆ ಕಡೆಯಿಂದ ಬರುತ್ತಿರುವ ಅಲ್ಪ ಪ್ರಮಾಣದ ಜವಳಿ ಸಿದ್ಧ ಉಡುಪುಗಳು ಮತ್ತು ಹಳೆಯ ಸ್ಟಾಕ್‌ಗಳ ವಿಲೇವಾರಿಯಲ್ಲೂ ಸಾಕಷ್ಟು ಕರಾಮತ್ತು ನಡೆಯುತ್ತಿದೆ. ಸಾವಿರ ರೂ. ಮೇಲ್ಪಟ್ಟ ಸಿದ್ಧ ಉಡುಪಿಗೆ ಶೇ.12 ರಷ್ಟು
ತೆರಿಗೆ. ಇದಕ್ಕಿಂತ ಕಡಿಮೆ ಮೌಲ್ಯದ ಉಡುಪಿಗೆ ಶೇ. 5 ರಷ್ಟು ತೆರಿಗೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಕೆಲವು ವ್ಯಾಪಾರಿಗಳು ಸಾವಿರ ರೂ.ಗಳಿಗಿಂತ ಹೆಚ್ಚಿನ ಸಿದ್ಧ ಚೂಡಿದಾರ್‌ ಒಂದನ್ನು ವೇಲ್‌, ಪ್ಯಾಂಟ್‌ ಮತ್ತು ಟಾಪ್‌ ಎಂದು ಮೂರು ಪ್ರತ್ಯೇಕ ವಸ್ತುಗಳನ್ನಾಗಿ ಮಾರಾಟ ಮಾಡುವ ಮೂಲಕ ಜಿಎಸ್‌ಟಿ ಮಂಡಳಿಗೆ ನೀರು ಕುಡಿಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next