ಬೀಜಿಂಗ್/ಇಸ್ತಾಂಬುಲ್: ಕಂಡು ಕೇಳರಿಯದ ಭಾರೀ ಮಳೆ, ಪ್ರವಾಹಕ್ಕೆ ಚೀನಾ, ಟರ್ಕಿ, ಜಪಾನ್ ದೇಶ ತತ್ತರಿಸಿ ಹೋಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಟರ್ಕಿಯ ಕಪ್ಪು ಸಮುದ್ರ ಪ್ರದೇಶದಲ್ಲಿ ಮಳೆ, ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದು ನಾನು ನೋಡಿದ ಅತ್ಯಂತ ಕೆಟ್ಟ ಪ್ರವಾಹ ದುರಂತವಾಗಿದೆ ಎಂದು ಟರ್ಕಿ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಅವರು ಬಾರ್ಟಿನ್, ಕಸ್ತಮೋನು ಮತ್ತು ಸಿನೋಪ್ ಪ್ರಾಂತ್ಯಗಳಲ್ಲಿ ಪ್ರವಾಹ, ಮಳೆ ಹಾನಿಯ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ 1700ಕ್ಕೂ ಅಧಿಕ ಜನರನ್ನು ಹೆಲಿಕಾಪ್ಟರ್, ಬೋಟ್ ಗಳ ನೆರವಿನೊಂದಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಪ್ರವಾಹಕ್ಕೆ 21 ಮಂದಿ ಸಾವು:
ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಸುರಿದ ಧಾರಾಕಾರ ಮಳೆ, ಪ್ರವಾಹದ ಪರಿಣಾಮ 21 ಮಂದಿ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿರುವುದಾಗಿ ಸ್ಥಳೀಯ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 13) ತಿಳಿಸಿದ್ದಾರೆ.
ಉತ್ತರ ಭಾಗದಲ್ಲಿನ ಸುಯಿಜೌ ನಗರದ ಲಿಯುಲಿನ್ ನಗರದಲ್ಲಿ ಭಾರೀ ಮಳೆಯಾಗಿದ್ದು, ಸುಮಾರು 8ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆ, ಪ್ರವಾಹದಲ್ಲಿ 21 ಮಂದಿ ಸಾವನ್ನಪ್ಪಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಯುಲಿನ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ 16 ಅಡಿಗಳಷ್ಟು ಪ್ರವಾಹದ ನೀರು ತುಂಬಿಕೊಂಡಿರುವುದಾಗಿ ವರದಿ ವಿವರಿಸಿದೆ. ಕ್ಸಿಯಾಂಗ್ ಯಾಂಗ್, ಸುಯಿಜೌ, ಕ್ಸಿಯಾಗಾನ್ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದೆ. ಇದರಿಂದ ಸುಮಾರು 2,86,000 ಜನರು ತೊಂದರೆಗೊಳಗಾಗಿದ್ದು, 7 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಹುಬೈ ಪ್ರಾಂತ್ಯದ ಐದು ನಗರಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಚೀನಾ ತುರ್ತು ಸಚಿವಾಲಯ ತಿಳಿಸಿದೆ.
ಪ್ರವಾಹಕ್ಕೆ ಜಪಾನ್ ತತ್ತರ:
ಜಪಾನ್ ನ ಪಶ್ಚಿಮ ಹಾಗೂ ವಾಯುವ್ಯ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಓರ್ವ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದಿರುವುದಾಗಿ ಜಪಾನ್ ಹವಾಮಾನ ಏಜೆನ್ಸಿ ಎಚ್ಚರಿಕೆಯನ್ನು ನೀಡಿದೆ.