ಹೈದರಾಬಾದ್ : ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅನುಮೂಲ ರೇವಂತ್ ರೆಡ್ಡಿ ಅವರು ಸಿಎಂ ಹುದ್ದೆಗೆ ಏರುವುದು ಬಹುತೇಕ ಸ್ಪಷ್ಟವಾಗಿದೆ.
ಎಬಿವಿಪಿಯೊಂದಿಗಿನ ವಿದ್ಯಾರ್ಥಿ ಚಟುವಟಿಕೆಯಿಂದ ಲಂಚದ ಆರೋಪದ ನಡುವೆ ಅಲ್ಪಾವಧಿಯ ಜೈಲುವಾಸದವರೆಗೆ ಅವರ ರಾಜಕೀಯ ಪಥವನ್ನು ಕಂಡುಕೊಂಡ ರೇವಂತ್ ರೆಡ್ಡಿ, ಈಗ ಕಾಂಗ್ರೆಸ್ ನಲ್ಲಿ ಪ್ರಭಾವಿ ಎನಿಸಿಕೊಂಡು ಮುಖ್ಯಮಂತ್ರಿ ಹುದ್ದೆಯ ಅಂಚಿನಲ್ಲಿದ್ದಾರೆ.
2015 ರ ‘ಮತಕ್ಕಾಗಿ ನಗದು’ ಪ್ರಕರಣದಲ್ಲಿ ರೇವಂತ್ ಅವರನ್ನು ಬಂಧಿಸಲಾಗಿತ್ತು. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ “ಏಜೆಂಟ್” ಎಂದು ಆರೋಪಿಸಿ ಪಕ್ಷಗಳನ್ನು ಬದಲಾಯಿಸಿದ್ದಕ್ಕಾಗಿ ಬಿಆರ್ ಎಸ್ ನಾಯಕರು ನಿರಂತರ ಟೀಕೆ ಮಾಡುತ್ತಿದ್ದರು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಂತೂ ರೇವಂತ್ ಅವರ ಎಬಿವಿಪಿ ಹಿನ್ನೆಲೆಯನ್ನು ಗುರಿಯಾಗಿಸಿ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.
ಬಿಆರ್‌ಎಸ್‌ನಲ್ಲಿ (ಆಗಿನ ಟಿಆರ್‌ಎಸ್)ನಲ್ಲಿ ಇದ್ದ ರೆಡ್ಡಿ ಅವರು 2006 ರಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಯಶಸ್ವಿಯಾದಾಗ ಮೊದಲು ರಾಜಕೀಯ ಕಚೇರಿಗೆ ಆಯ್ಕೆಯಾದರು. ಅವರು ಜಿಲ್ಲಾ ಪರಿಷತ್ತಿನ ಪ್ರಾದೇಶಿಕ ಕ್ಷೇತ್ರ (ZPTC) ಸದಸ್ಯರಾಗಿ ನಂತರ ಸ್ವತಂತ್ರರಾಗಿ ಆಯ್ಕೆಯಾದರು. ಅವರು 2007 ರಲ್ಲಿ ಸ್ವತಂತ್ರವಾಗಿ ಅವಿಭಜಿತ ಆಂಧ್ರಪ್ರದೇಶದ ವಿಧಾನ ಪರಿಷತ್ತಿಗೆ ಆಯ್ಕೆಯಾದರು.
ರೆಡ್ಡಿ ಟಿಡಿಪಿಗೆ ಸೇರ್ಪಡೆಗೊಂಡು ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತರಾಗಿ ಗುರುತಿಸಿಕೊಂಡರು. ಪದವೀಧರರಾದ ರೆಡ್ಡಿ ಅವರು 2009 ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ವಿಧಾನಸಭೆಗೆ ಆಯ್ಕೆಯಾದರು ಮತ್ತು ನಂತರ 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯಾದ ಬಳಿಕ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿಯ ವಿರುದ್ಧ ಸೋತು ಸ್ವಲ್ಪ ಸಮಯ ರಾಜಕೀಯ ವನವಾಸ ಅನುಭವಿಸಿದರು. ಬಳಿಕ ಟಿಡಿಪಿ ತೊರೆದು 2017-18ರಲ್ಲಿ ದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು.
2019 ರ ಚುನಾವಣೆಯಲ್ಲಿ ಮಲ್ಕಾಜ್‌ಗಿರಿಯಿಂದ ಲೋಕಸಭೆಗೆ ಚುನಾಯಿತರಾದರು, ಕ್ಷೇತ್ರದಲ್ಲಿ ದೇಶದಾದ್ಯಂತದ ಜನರ ಉಪಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಮಿನಿ-ಇಂಡಿಯಾ’ ಎಂದು ಬಣ್ಣಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಕಾಂಗ್ರೆಸ್‌ನಲ್ಲಿ ಹೊಸಬರಾದರೂ 2021 ರಲ್ಲಿ ರೆಡ್ಡಿ ಅವರನ್ನು ಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದು ರಾಜ್ಯ ಕಾಂಗ್ರೆಸ್ ಘಟಕದ ಹಲವು ವರಿಷ್ಠರಲ್ಲಿ ಅಸಮಾಧಾನಕ್ಕೂ ಕಾರಣ ವಾಗಿತ್ತು.