ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಯಲ್ಲಿ ತಯಾರಾಗಿರುವ “ಬೆಸ್ಟ್ ಫ್ರೆಂಡ್ಸ್’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿವೆ. ಸುಮಾರು 158 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ತೃತಿಯ ಜಾತಿಯ ಜನರ ಪರವಾಗಿ ಹಾಗೂ ಐಪಿಸಿ ಕಾಲಂ 377 ಅನ್ವಯ ಸಲಿಂಗ ಪ್ರೀತಿ ಅಪರಾಧವಲ್ಲ ಎಂಬ ಸವೊìಚ್ಚ ನ್ಯಾಯಲಯದ ಪಂಚಪೀಠದ ತೀರ್ಪು ಇತ್ತೀಚೆಗೆ ಹೊರಬಂದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದೇ ವೇಳೆ ನಿರ್ಲಕ್ಷಿತ ತೃತಿಯ ಲಿಂಗಿಗಳು ಮತ್ತು ಸಲಿಂಗಿಗಳ ಸಮುದಾಯದ ಜನರ ಭಾವನೆಗಳನ್ನು ಈ ಚಿತ್ರದಲ್ಲಿ ತೆರೆಮೇಲೆ ತೆರೆದಿಡಲಾಗುತ್ತಿದೆ ಎನ್ನುತ್ತದೆ ಚಿತ್ರತಂಡ. ಅಂದಹಾಗೆ, “ಬೆಸ್ಟ್ ಫ್ರೆಂಡ್ಸ್’ ಚಿತ್ರಕ್ಕೆ ಟೇಶಿ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಲಯನ್ ಎಸ್. ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
“2012ರಲ್ಲಿ ಹಾಸನದಲ್ಲಿ ಇಬ್ಬರು ಸಲಿಂಗಿ ಹೆಣ್ಣು ಮಕ್ಕಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಈ ಚಿತ್ರಕ್ಕಾಗಿ ಸಾಕಷ್ಟು ವೈಜ್ಞಾನಿಕವಾಗಿ ಅಧ್ಯಯನ, ಪ್ರವಾಸ, ಸಂದರ್ಶನ ಮತ್ತು ಚಿತ್ರೀಕರಣಕ್ಕಾಗಿ ಮಾಡಿ ಸುಮಾರು ಆರು ವರ್ಷಗಳ ಸಮಯವನ್ನು ತೆಗೆದುಕೊಳ್ಳಲಾಗಿದೆ. ಚಿತ್ರದ ಮುಖ್ಯ ಕಥಾಹಂದರದಲ್ಲಿ ನೈಜ ಘಟನೆಯನ್ನಿಟ್ಟುಕೊಂಡು, ಉಳಿದಂತೆ ಒಂದಷ್ಟು ಕಾಲ್ಪನಿಕ ಸಂಗತಿಗಳನ್ನು ಇಟ್ಟುಕೊಂಡು ಚಿತ್ರವನ್ನು ತೆರೆಮೇಲೆ ತರಲಾಗಿದೆ’ ಎನ್ನುತ್ತದೆ ಚಿತ್ರತಂಡ.
“ತಂದೆ-ತಾಯಿಯಿಂದ ಜನ್ಮ ಪಡೆದಿರುವ ತೃತೀಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡಿರುವ ವಿಶಿಷ್ಟ ಹಾಗೂ ವಿಭಿನ್ನ ಸಂದೇಶವನ್ನು ಸಾರುವುದೇ ಚಿತ್ರದ ಹೂರಣವಾಗಿದೆ. ಅಡಿಬರಹದಲ್ಲಿ “ಇದು ತೀರ್ಪು ನೀಡಲಾಗದ ಪ್ರೇಮಕಥೆ’ ಎಂದು ಹೇಳಿದ್ದೇವೆ. ಅಂತಿಮವಾಗಿ ಜನರೇ ಯಾವುದು ಸರಿ, ಯಾವುದು ತಪ್ಪು ಎಂದು ಇದನ್ನು ನಿರ್ಣಯಿಸಲಿ’ ಎನ್ನುವುದು ಚಿತ್ರತಂಡದ ಮಾತು.
ಇನ್ನು ಚಿತ್ರದಲ್ಲಿ “ಬೆಸ್ಟ್ ಫ್ರೆಂಡ್ಸ್’ ಆಗಿ ಮೇಘನಾ ಮತ್ತು ದ್ರವ್ಯಾ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಆಶಾ, ಸುಮತಿ ಪಾಟೀಲ್ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಆರವ್ ರಿಶಿಕ್ ಸಂಗೀತ ಸಂಯೋಜನೆಯಿದ್ದು, ಸುರೇಶ್ ಗುಟ್ಟಹಳ್ಳಿ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ರವಿ ಸುವರ್ಣ ಮತ್ತು ಧನುಷ್ ಜಯನ್ ಚಿತ್ರದ ದೃಶ್ಯಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಕೆ.ಆರ್.ಲಿಂಗರಾಜು ಸಂಕಲನ ಚಿತ್ರದಲ್ಲಿದೆ. ಅಂಬ್ರೆಲಾ ಆಡಿಯೋಸ್ ಸಂಸ್ಥೆಯ ಮೂಲಕ “ಬೆಸ್ಟ್ ಫ್ರೆಂಡ್ಸ್’ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಮತ್ತಿತರ ರಾಜಕೀಯ, ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಹಾಡುಗಳು ಲೋಕಾರ್ಪಣೆಗೊಂಡವು.