ರಾಯಚೂರು: ಕೆಎಎಸ್ ಪಾಸ್ ಮಾಡಬೇಕೆಂಬ ಕನಸು ಹೊತ್ತು ಪರೀಕ್ಷೆಗೆ ಸಿದ್ಧಗೊಳ್ಳುತಿರುವ ಸರ್ಕಾರಿ ನೌಕರರಿಬ್ಬರು ತಮ್ಮೊಟ್ಟಿಗೆ ಸಹಸ್ರಾರು ವಿದ್ಯಾರ್ಥಿಗಳನ್ನು ಅದೇ ಹಾದಿಯಲ್ಲಿ ಕರೆದೊಯ್ಯುತ್ತಿದ್ದು, ಪ್ರತಿ ರವಿವಾರ ಸ್ವಂತ ದುಡ್ಡಿನಲ್ಲಿ ಪ್ರಾಯೋಗಿಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಲ್ಲಿನ ಅರಣ್ಯ ಇಲಾಖೆಯ ನೌಕರ ಮಹೇಂದ್ರ ನಾಯಕ ಹಾಗೂ ಆಯುಷ್ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನರಸಪ್ಪ ಅಸ್ಕಿಹಾಳ ಸೇರಿ ಪ್ರತಿ ವಾರ ಸ್ವಂತ ಹಣದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದಾರೆ. ಪೊಲೀಸ್ ಹುದ್ದೆ, ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ನಗರದ ಜಿಲ್ಲಾ ಗ್ರಂಥಾಲಯ ಬಳಿ ಪರೀಕ್ಷೆ ನಡೆಸಲಾಗುತ್ತಿದೆ. ಪೂರಕ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲ ಖರ್ಚು-ವೆಚ್ಚಗಳನ್ನು ಇವರೇ ಭರಿಸುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಅನೇಕ ಕೇಂದ್ರಗಳು ಈಗ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಆಕಾಂಕ್ಷಿಗಳಿಂದ ಸಾವಿರಾರು ರೂ. ಹಣ ಪಡೆದು ತರಬೇತಿ ನೀಡುತ್ತಿವೆ. ಆದರೆ ಬಡ ಮಕ್ಕಳಿಗೆ ಇಂಥ ಕಡೆ ತರಬೇತಿ ಪಡೆಯಲು ಸಾಧ್ಯವಾಗದೆ ಸರ್ಕಾರಿ ನೌಕರಿ ಗಗನ ಕುಸುಮವಾಗಿದೆ. ಇಂಥ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸಕ್ತಿ ಮೂಡಲಿ ಎಂಬ ನಿಟ್ಟಿನಲ್ಲಿ ಈ ಕಾರ್ಯ ಕೈಗೊಂಡಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
200-300 ವಿದ್ಯಾರ್ಥಿಗಳು ಹಾಜರ್: ಪ್ರತಿ ವಾರ ಇವರು ನಡೆಸುವ ಪರೀಕ್ಷೆಗೆ ಏನಿಲ್ಲವೆಂದರೂ 200-300 ಜನ ಹಾಜರಾಗುತ್ತಿದ್ದಾರೆ. ಕಳೆದ 14 ವಾರಗಳಿಂದ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದು, ಅಂದಾಜು 1500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ನೀಡುವ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೂಡ ಇವರೇ ಸಿದ್ಧಪಡಿಸುವುದು ವಿಶೇಷ. ಪರೀಕ್ಷೆ ನಂತರ ಸ್ಥಳದಲ್ಲಿಯೇ ಅಂಕ ಘೋಷಿಸಲಾಗುತ್ತದೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡುತ್ತಾರೆ. ಈ ಎಲ್ಲ ಕಾರ್ಯಗಳಿಗೆ ಆಗುವ ವೆಚ್ಚವನ್ನು ಅವರೇ ಭರಿಸುತ್ತಾರೆ. ಸರ್ಕಾರವೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಜಾತಿ ತಾರತಮ್ಯ ಮಾಡಿದರೆ; ಇವರು ಮಾತ್ರ ಯಾರೇ ಬಂದರೂ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಾರೆ. ಇವರ ಕಾರ್ಯಕ್ಕೆ ವಿದ್ಯಾರ್ಥಿಗಳಾದ ಸಂಜೀವ್, ಪ್ರಕಾಶ, ಚಂದಪ್ಪ, ನರೇಶ ಸೇರಿದಂತೆ ಹಲವರು ಸಹಕಾರ ನೀಡುತ್ತಿದ್ದಾರೆ.
ಇವರು ಮಾತ್ರವಲ್ಲ ಇವರ ಅನೇಕ ಸ್ನೇಹಿತರು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವಾರ ಅಂಥವರಲ್ಲಿ ಒಬ್ಬರನ್ನು ಆಹ್ವಾನಿಸಿ ಉದ್ಯೋಗಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ನಾವು ಸರ್ಕಾರಿ ನೌಕರಿ ಪಡೆದರೂ ಕೆಎಎಸ್‌ಗೆ ಅಧ್ಯಯನ ನಡೆಸುತ್ತಿದ್ದೇವೆ. ಈಗಾಗಲೇ ಎರಡು ಬಾರಿ ಪ್ರಯತ್ನಿಸಿದ್ದೇನೆ. ನಾವು ಅಧ್ಯಯನ ಮಾಡುವ ವಿಷಯಗಳನ್ನು ಬೇರೆ ವಿದ್ಯಾರ್ಥಿಗಳಿಗೂ ತಿಳಿಸಿದರೆ ಅವರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆನ್ನುವ ಮನೋಭಾವ ಮೂಡುತ್ತದೆ. ಕಳೆದ 14 ವಾರಗಳಿಂದ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತಿದೆ. –
ಮಹೇಂದ್ರ ನಾಯಕ, ಅರಣ್ಯ ಇಲಾಖೆ ಸಿಬ್ಬಂದಿ, ರಾಯಚೂರು.
ಉದ್ಯೋಗಾಂಕ್ಷಿಗಳಿಗೆ ನೆರವಾಗಲಿ ಎಂಬ ದೃಷ್ಟಿಯಿಂದ ಪ್ರತಿವಾರವೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಎಲ್ಲ ಸಮುದಾಯದ ಉದ್ಯೋಗಾಂಕ್ಷಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಯಾರಿಂದಲೂ ಹಣ ಪಡೆಯಲ್ಲ. ಉದ್ಯೋಗಾಂಕ್ಷಿಗಳಿಗೂ ಇಂಥ ಪರೀಕ್ಷೆಯಿಂದ ಭಯ ಹೋಗಲಾಡಿಸಲು ಅನುಕೂಲವಾಗುತ್ತದೆ. –
ನರಸಪ್ಪ, ಆಯುಷ್ ಇಲಾಖೆ ನೌಕರ.
ಸಾಕಷ್ಟು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಬರೆಯಬೇಕು. ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ. ಇಂಥ ಪರೀಕ್ಷೆಗಳು ನಡೆಸುವುದರಿಂದ ಪರೀಕ್ಷೆಯ ಭಯವೂ ಹೋಗುತ್ತದೆ. ಅಲ್ಲದೇ ಹೆಚ್ಚು ಅಧ್ಯಯನ ಮಾಡಲು ಅನುಕೂಲವಾಗಲಿದೆ. ಮಹೇಂದ್ರ ನಾಯಕ ಹಾಗೂ ನರಸಪ್ಪ ಅಸ್ಕಿಹಾಳ ಅವರ ಈ ಸೇವೆ ಶ್ಮಾಘನೀಯ. –
ನಿಸ್ಸಾರ್ ಅಹ್ಮದ್, ಡಿವೈಎಸ್‌ಪಿ, ಮುನಿರಾಬಾದ್.
-ಸಿದ್ಧಯ್ಯಸ್ವಾಮಿ ಕುಕನೂರು