Advertisement

BPL ಚೀಟಿದಾರರಿಗೆ ಉಚಿತ ಚಿಕಿತ್ಸೆ

01:55 AM Jul 27, 2018 | Karthik A |

ಪುತ್ತೂರು: ಎಲ್ಲ ಆರೋಗ್ಯ ಸಂಬಂಧಿಸಿದ ಯೋಜನೆಗಳನ್ನು ವಿಲೀನಗೊಳಿಸಿ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ (ಯುನಿವರ್ಸಲ್‌ ಹೆಲ್ತ್‌ಕೇರ್‌) ಯೋಜನೆಯ ಮೂಲಕ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಹಾಗೂ APL ಪಡಿತರ ಚೀಟಿದಾರರಿಗೆ ಶೇ. 30ರಷ್ಟು ಚಿಕಿತ್ಸಾ ವೆಚ್ಚವನ್ನು ಸರಕಾರ ಪಾವತಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಡಲ್‌ ಅಧಿಕಾರಿ ಜಗನ್ನಾಥ ಹೇಳಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವತಿಯಿಂದ ಗುರುವಾರ ನಗರದ ಕೋ -ಆಪರೇಟಿವ್‌ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ತಾಲೂಕಿನ ಸಹಕಾರಿ ಸಂಘಗಳ ಕಾರ್ಯ ನಿರ್ವಹಣಾಧಿಕಾರಿಗಳಿಗಾಗಿ ನಡೆದ ಆರೋಗ್ಯ ಕರ್ನಾಟಕ ಯೋಜನೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

Advertisement

ಜನಸಾಮಾನ್ಯರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರಕಾರ ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಅಥವಾ ಅತ್ಯಲ್ಪ ಸೇವಾ ಶುಲ್ಕದೊಂದಿಗೆ ಪಡೆಯಬಹುದಾಗಿದೆ. ಕ್ಲಿಷ್ಟಕರ ದ್ವಿತೀಯ ಹಂತ ಮತ್ತು ತೃತೀಯ ಹಂತದ ಸೇವೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲಿ ಸೇವೆ ಲಭ್ಯ ಇಲ್ಲದಿದ್ದರೆ, ವೈದ್ಯರ ಶಿಫಾರಸು ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ಅರ್ಹತಾ ರೋಗಿ ಮತ್ತು ಸಾಮಾನ್ಯ ರೋಗಿ ಎಂದು ಎರಡು ವರ್ಗಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013ರಡಿ BPL ಪಡಿತರ ಚೀಟಿ ಹೊಂದಿರುವ ಅರ್ಹತಾ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ದೊರೆಯಲಿದೆ. APL ಪಡಿತರ ಅಥವಾ ಯಾವುದೇ ಪಡಿತರ ಚೀಟಿ ಇಲ್ಲದ ಸಾಮಾನ್ಯ ರೋಗಿಗಳಿಗೆ ಪ್ಯಾಕೇಜ್‌ ದರದ ಶೇ. 30ನ್ನು ಸರಕಾರ ಭರಿಸುತ್ತದೆ. ಆ. 15ರಿಂದ ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಯಾಗಲಿದ್ದು, ಬಳಿಕ ಈ ಯೋಜನೆಯ ಜತೆಗೆ ವಿಲೀನಗೊಳ್ಳಲಿದ್ದು, 5 ಲಕ್ಷ ರೂ. ತನಕ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.

ಚಿಕಿತ್ಸಾ ವೆಚ್ಚ
ಐವರು ಸದಸ್ಯರಿರುವ ಒಂದು ಕುಟುಂಬಕ್ಕೆ ನಿರ್ದಿಷ್ಟ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ವಾರ್ಷಿಕ 30 ಸಾವಿರ ರೂ. ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಳಿಗೆ ಕುಟುಂಬವೊಂದಕ್ಕೆ ವಾರ್ಷಿಕ 1.50 ಲಕ್ಷ ರೂ.ವರೆಗೆ ನೆರವು ಲಭ್ಯ. ನಿಗದಿತ ಮಿತಿ ಪೂರ್ಣವಾಗಿ ಉಪಯೋಗವಾದ ಅನಂತರ ತೃತೀಯ ಹಂತದ ತುರ್ತು ಚಿಕಿತ್ಸೆಗೆ ಹೆಚ್ಚಿನ 50 ಸಾವಿರ ರೂ.ಗಳ ನೆರವು ಮಂಜೂರಾದ ಪ್ಯಾಕೇಜ್‌ ದರಗಳಲ್ಲಿ ಲಭ್ಯ. ಬಿಪಿಎಲ್‌ ಕಾರ್ಡ್‌ದಾರರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಪಾರಸು ಪಡೆದು ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅನಂತರ ಯಾವುದೇ ಹಣ ಪಾವತಿಸುವಂತಿಲ್ಲ. APL ಕಾರ್ಡ್‌ದಾರರು ಹಾಗೂ ಯಾವುದೇ ಕಾರ್ಡ್‌ ಹೊಂದಿಲ್ಲದ ಸಾಮಾನ್ಯ ರೋಗಿಗಳಿಗೆ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಯೋಜನೆಯ ಪ್ಯಾಕೇಜ್‌ ದರದ ಶೇ. 30ನ್ನು ಮಾತ್ರ ಸರಕಾರ ಭರಿಸುತ್ತದೆ ಎಂದು ಮಾಹಿತಿ ನೀಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಗೋಪಾಲಯ್ಯ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸುರೇಶ್‌ ಭಟ್‌ ಉಪಸ್ಥಿತರಿದ್ದರು. ಸವಣೂರು ಸಿ.ಎ. ಬ್ಯಾಂಕ್‌ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್‌ ಸ್ವಾಗತಿಸಿ, ವಂದಿಸಿದರು.

104ಕ್ಕೆ ಕರೆ ಮಾಡಿ
ಟೋಲ್‌ ಫ್ರೀ ನಂ. 104ಕ್ಕೆ ಕರೆ ಮಾಡಿ ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಮಾಹಿತಿ ಪಡೆದುಕೊಳ್ಳಬಹುದು. 18004258330ಗೂ ಕರೆ ಮಾಡಿಯೂ ಮಾಹಿತಿ ಪಡೆದುಕೊಳ್ಳಬಹುದು. ಪುತ್ತೂರಿನಲ್ಲಿ ಆದರ್ಶ, ಪ್ರಗತಿ, ಚೇತನಾ, ಮಹಾವೀರ, ಮಂಗಳೂರಿನಲ್ಲಿ ಎ.ಜೆ. ಶೆಟ್ಟಿ, ಯೇನೆಪೋಯಾ, ಇಂಡಿಯಾನ, ಒಮೆಗಾ, ಯುನಿಟಿ, ಕಣಚ್ಚಾರು, ಕೆ.ಎಂ.ಸಿ. ಜ್ಯೋತಿ ಹಾಗೂ ಕೆಎಂಸಿ ಅತ್ತಾವರ ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಸೌಲ್ಯಭ್ಯಗಳು ಅನ್ವಯವಾಗಲಿದ್ದು, ಸರಕಾರಿ ಆಸ್ಪತ್ರೆಯಿಂದ ಶಿಫಾರಸ್ಸು ಮಾಡಿದಲ್ಲಿ ಮಾತ್ರವೇ ಇಲ್ಲಿ ಯೋಜನೆ ಸೌಲಭ್ಯ ಪಡೆಯಬಹುದು.

Advertisement

ನೋಂದಣಿ ವಿಧಾನ
APL, BPL ಪಡಿತರ ಚೀಟಿದಾರರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಅಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿಯ ನಕಲು ಪ್ರತಿ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಈ ಎರಡೂ ಕಾರ್ಡ್‌ ಇಲ್ಲದವರು ಆರೋಗ್ಯ ಕಾರ್ಡ್‌ ಪಡೆಯುವವರೆಗೂ ಆಧಾರ್‌ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಕರ್ನಾಟಕ ಕಾರ್ಡ್‌ ನೋಂದಾಯಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಸರಕಾರವೇ ಎಲ್ಲ ಶುಲ್ಕವನ್ನು ಭರಿಸುತ್ತಿದೆ. ನಿಗದಿತ ನೋಂದಣಿ ಕೌಂಟರ್‌ನಲ್ಲಿ ಕಾರ್ಡ್‌ ವೆಚ್ಚ 10 ರೂ. ಪಾವತಿಸಿ ಆರೋಗ್ಯ ಕಾರ್ಡ್‌ ಪಡೆಯಬಹುದು ಜಗನ್ನಾಥ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next