Advertisement

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

08:42 AM Nov 20, 2024 | Team Udayavani |

ಉಳ್ಳಾಲ: ರಾಜ್ಯ ಸರಕಾರದಿಂದ ಆದೇಶ ಬಂದಾಗ ಏಕಾಏಕಿ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಮೊದಲು ತನಿಖೆ ಮಾಡಿ ವರದಿ ಕಳುಹಿಸಬೇಕು. ಅರ್ಹತೆಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು. ಏಕಾಏಕಿ ಬಡವರ ಬಿಪಿಎಲ್‌ ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ವಿಧಾನ ಸಭೆಯ ಸ್ಪೀಕರ್‌ ಹಾಗೂ ಮಂಗಳೂರು ಶಾಸಕ ಯು. ಟಿ. ಖಾದರ್‌ ತರಾಟೆಗೆ ತೆಗೆದುಕೊಂಡರು.

Advertisement

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಪಿಎಲ್‌ ಕಾರ್ಡ್‌ ರದ್ದಾಗಿರುವ ವಿಚಾರ ಪ್ರಸ್ತಾಪವಾದ ಖಾದರ್‌ ಸಿಟ್ಟಿಗೆದ್ದರು.

ಉಳ್ಳಾಲ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡವರ ಪಡಿತರ ರದ್ದುಪಡಿಸಬೇಡಿ. ಅಧಿಕಾರಿಗಳು ಎಷ್ಟು ತರಾತುರಿಯಲ್ಲಿ ಪಡಿತರ ರದ್ದುಪಡಿಸಿದ್ದೀರೋ ಅಷ್ಟೇ ತರಾತುರಿಯಲ್ಲಿ ತನಿಖೆ ಮಾಡಿ ಕೇವಲ 15 ದಿನಗಳಲ್ಲಿ ಅರ್ಹರನ್ನು ಗುರುತಿಸಿ ಸಮಸ್ಯೆ ಸರಿಪಡಿಸಿ ಎಂದು ಸೂಚಿಸಿದರು.

ಹ‌ವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ ಅಧಿಕಾರಿಗಳು ಪಡಿತರ ರದ್ದುಪಡಿಸಿ ಎಂದು ಸೂಚನೆ ಕಳುಹಿಸಿದ ಕೂಡಲೇ ಇಲ್ಲಿನ ಅಧಿಕಾರಿಗಳು ಪರಿಶೀಲನೆ ಮಾಡದೆ ಪಾಲನೆ ಮಾಡುವುದಾದರೆ ನಿಮಗೆ ಸರಕಾರ ವೇತನ ಕೊಡುವುದೇಕೆ? ಈ ರೀತಿ ಏಕಾಏಕಿ ಪಡಿತರ ರದ್ದುಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಾದರ್‌ ಹೇಳಿದರು.

ನರಿಂಗಾನ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್‌ ಕಾಜವ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜ್ಯೋತಿ ಡಿ’ಸೋಜಾ, ತಹಶೀಲ್ದಾರ್‌ ಪುಟ್ಟರಾಜು, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್‌, ಎಡಿಎಲ್‌ಆರ್‌ ಮುಖ್ಯಸ್ಥ ನಿಸಾರ್‌ ಅಹ್ಮದ್‌, ತಾಂತ್ರಿಕ ವಿಭಾಗ ಮುಖ್ಯಸ್ಥ ತಾರಾನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಆರ್‌.ಈಶ್ವರ್‌, ಎಸಿಪಿ ಧನ್ಯಾ ನಾಯಕ್‌ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅ ಧಿಕಾರಿಗಳು, ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದರು.

Advertisement

ಸಿಬಂದಿ ಸುಧಾ ನಾಡಗೀತೆ ಹಾಡಿದರು. ಸದಸ್ಯ ಲತೀಫ್‌ ಕಾಪಿಕಾಡ್‌ ಸ್ವಾಗತಿಸಿದರು. ಅಬ್ದುಲ್‌ ರಹ್ಮಾನ್‌ ಚಂದಹಿತ್ಲು ವಂದಿಸಿದರು.

ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಹೈದರ್‌ ಕೈರಂಗಳ ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಜನಿ ಡಿ. ಕಾರ್ಯಕ್ರಮ ನಿರೂಪಿಸಿದರು. ಸ್ವತ್ಛತಾ ರಾಯಭಾರಿ ಶೀನ ಶೆಟ್ಟಿ ಅವರ ನೇತೃತ್ವದಲ್ಲಿ ಶೂನ್ಯ ಕಸ ಮುಕ್ತ ಗ್ರಾಮಕ್ಕೆ ಚಾಲನೆ ನೀಡಲಾಯಿತು. ಮತದಾರ ಪಟ್ಟಿಗೆ ನೋಂದಣಿ, ಗ್ಯಾರಂಟಿ ಯೋಜನೆ ಸಮಸ್ಯೆಗಳ ಪರಿಹಾರ, ಪಡಿತರ ಚೀಟಿ ಸಮಸ್ಯೆ ಪರಿಹಾರ, ಆಧಾರ್‌ ನೋಂದಣಿ, ತಿದ್ದುಪಡಿ ನಡೆಯಿತು.

ಮಹಿಳೆಗೆ ಯು.ಟಿ.ಕೆ ಕುಠೀರ ಹಸ್ತಾಂತರ
ಜನಸಂಪರ್ಕ ಸಭೆಯ ಪೂರ್ವಭಾವಿಯಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶಾಂತಿ ಪಳಿಕೆಯ ಪದ್ಮಾವತಿ ಎಂಬ ಪರಿಶಿಷ್ಟ ಮಹಿಳೆಗೆ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ “ಯು.ಟಿ.ಕೆ. ಕುಠೀರ”ದ ಕೀಲಿ ಕೈ ಹಸ್ತಾಂತರ, ಕಳ್ಳರಕೋಡಿ ಶಾಲಾ ಕೊಠಡಿ ಉದ್ಘಾಟನೆ, ಸಾಧಕ ಸಂಘ ಸಂಸ್ಥೆ, ಸಾಧಕರಿಗೆ ಸಮ್ಮಾನ, ಉಳ್ಳಾಲ ಹಾಗೂ ಬಂಟ್ವಾಳ ತಾಲೂಕಿನ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆ, ಹಕ್ಕು ಪತ್ರ ವಿತರಣೆಗೆ ಬಾಕಿ ಇದ್ದವರಿಗೆ ಹಕ್ಕು ಪತ್ರ ವಿತರಣೆ, ಪಂಚಾಯತ್‌ ಕಚೇರಿ ಆವರಣದಲ್ಲಿ ಅಳವಡಿಸಿದ ಇಂಟರ್‌ ಲಾಕ್‌ ಹಾಗೂ ಮುಖ್ಯದ್ವಾರ ಉದ್ಘಾಟಿಸಿ ವಿವಿಧ ಕಾಮಗಾರಿಗಳನ್ನು ಅವರು ಉದ್ಘಾಟಿಸಿದರು.

ಸಕ್ರಿಯ ಪಂಚಾಯತ್‌ಗೆ ಹೆಚ್ಚು ಅನುದಾನ
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಗ್ರಾಮಕ್ಕೂ 75 ಲಕ್ಷದಿಂದ ಒಂದು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸರಿಯಾಗಿ ಕೆಲಸ ಮಾಡಿದ ಪಂಚಾಯತ್‌ಗೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಯು.ಟಿ. ಖಾದರ್‌ ಹೇಳಿದರು.

ಕುಡಿಯುವ ನೀರು, ರಸ್ತೆ, ಪಡಿತರ, ವಿದ್ಯುತ್‌, ಸರ್ವೇ ಇಲಾಖೆಯ ಸಮಸ್ಯೆ ಪ್ರಮುಖವಾಗಿದೆ. ತಾಲೂಕು ಕಚೇರಿಗೆ ಹೋಗಿ ಕೆಲಸ ಮಾಡಿಸಲು ಸಾಧ್ಯ ಇಲ್ಲದವವರಿಗಾಗಿ ಕಾಲಬುಡಕ್ಕೇ ಅ ಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಲು ಜನಸಂಪರ್ಕ ಸಭೆ ಅಯೋಜಿಸಲಾಗಿದೆ. ಅರ್ಜಿ ಕೊಟ್ಟವರಿಗೆ ವಾರದಲ್ಲೇ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜನಪ್ರತಿನಿಧಿಗಳು ಐದು ವರ್ಷ ರಾಜಕೀಯ ಮಾಡುತ್ತಾ ಇರಬೇಡಿ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಇರಲಿ. ಇತರ ಸಮಯದಲ್ಲಿ ರಾಜಕೀಯ ಆಫ್‌ ಮಾಡಿ ಅಭಿವೃದ್ಧಿ ಕೆಲಸ ಮಾಡಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next