Advertisement

ಮನೆ ಬಾಗಿಲಿಗೇ ಆರೋಗ್ಯ ಸೇವೆ; ಸದ್ಬಳಕೆ ಮಾಡಿಕೊಳ್ಳಿ

03:53 PM Mar 21, 2022 | Team Udayavani |

ಮಂಡ್ಯ: ಮನೆ ಬಾಗಿಲಿಗೆ ಬಂದ ಆರೋಗ್ಯ ಸೇವೆಯನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಐದು ರೂ. ವೈದ್ಯ ಎಂದು ಖ್ಯಾತಿ ಪಡೆದಿರುವ ಚರ್ಮರೋಗ ತಜ್ಞ ಡಾ.ಎಸ್‌.ಸಿ. ಶಂಕರೇಗೌಡ ಸಲಹೆ ನೀಡಿದರು.

Advertisement

ತಾಲೂಕಿನ ಬಿ.ಗೌಡಗೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶ್ರೀಕಾಲಭೈರವೇಶ್ವರ ಜನಸ್ನೇಹಿ ಟ್ರಸ್ಟ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಸೇರಿ ಹಲವು ಸಂಘ ಸಂಸ್ಥೆಗಳು ಜನರ ಆರೋಗ್ಯದ ದೃಷ್ಟಿಯಿಂದ ಶಿಬಿರಗಳನ್ನು ಏರ್ಪಡಿಸುತ್ತವೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಎಲ್ಲಿ ಉತ್ತಮ ಪರಿಸರ ಇರುತ್ತೋ ಅಲ್ಲಿ ಉತ್ತಮ ಆರೋಗ್ಯ ಇರುತ್ತದೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದನ್ನು ಮೊದಲು ಕಲಿಯಬೇಕು. ಶಾಲಾ ಆವರಣವನ್ನು ಶುಚಿಯಾಗಿಡಬೇಕು. ಅಲ್ಲಿ ಮಕ್ಕಳು ಕಲಿಯುತ್ತಾರೆ ಎಂಬ ಅರಿವು ನಮಗಿರಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ: 40 ವರ್ಷಗಳಲ್ಲಿ ಕಂಡಿರದ ಆರೋಗ್ಯ ಸಂಕಷ್ಟ ಪರಿಸ್ಥಿತಿಯನ್ನು ಈ ಎರಡೂವರೆ ವರ್ಷಗಳಲ್ಲಿ ನೋಡಿದ್ದೇವೆ. ದೇಶದ ಅಭಿವೃದ್ಧಿಗೆ ಕೋವಿಡ್‌ ಮಾರಕವಾಗಿತ್ತು. ಅದನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿವೆ. ದೊಡ್ಡ ನಗರಗಳಿಗಷ್ಟೇ ಅಲ್ಲದೆ, ಗ್ರಾಮೀಣ, ಸಣ್ಣ ಪುಟ್ಟ ಪಟ್ಟಣ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪಿಸುತ್ತಿರುವುದು ಈ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಜಾಗೃತಿ ಮೂಡಿಸುವುದು ಅವಶ್ಯಕ: ಸದೃಢ ಶರೀರ ಕಾಪಾಡಿಕೊಳ್ಳಬೇಕಾದರೆ ಮನಸ್ಥಿತಿ ಚೆನ್ನಾಗಿರಬೇಕು. ಕಾಯಿಲೆ ಬಂದಾಗ ಭಯ ಬಿಟ್ಟು ಸಮರ್ಪಕವಾಗಿ ವೈದ್ಯೋಪಚಾರ ಪಡೆದಲ್ಲಿ ಎಲ್ಲಾ ಕಾಯಿಲೆಗಳೂ ಗುಣವಾಗುತ್ತವೆ. ಸ್ವಯಂಪ್ರೇರಿತವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳೂ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಸಲಹೆ ನೀಡಿದರು.

Advertisement

ಸೂಕ್ತ ಚಿಕಿತ್ಸೆ ಪಡೆದ್ರೆ ಕ್ಯಾನ್ಸರ್‌ ವಾಸಿ ಆಗುತ್ತೆ: ಸೀನಿಯರ್‌ ಸರ್ಜನ್‌ ಡಾ.ಟಿ.ಎಚ್‌.ಆಂಜನಪ್ಪ ಮಾತನಾಡಿ, ಹಲವು ಹೆಣ್ಣು ಮಕ್ಕಳು ಗರ್ಭಕೋಶ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇವರು ಚಿಕಿತ್ಸೆ ಪಡೆಯುವುದಿಲ್ಲ. ದೇಶದಲ್ಲಿ ನಾಚಿಕೆ ಮತ್ತು ಭಯ ಈ ಎರಡು ಕಾರಣಗಳಿಂದಾಗಿ ಸಲಹೆ ಪಡೆಯುವುದಿಲ್ಲ. ಇದನ್ನು ಬಿಟ್ಟು ತಜ್ಞ ವೈದ್ಯರ ಸಲಹೆ ಪಡೆದಲ್ಲಿ ಕ್ಯಾನ್ಸರ್‌ ಅನ್ನು ವಾಸಿ ಮಾಡಬಹುದು ಎಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ಆರೋಗ್ಯ ಬಹಳ ಮುಖ್ಯವಾದದ್ದು. ಆರೋಗ್ಯವನ್ನು ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗ್ರಾಮೀಣ ಜನರಿಗೆ ಅರಿವು ಮೂಡಿಸಿದರು.

ಗ್ರಾಪಂ ಅಧ್ಯಕ್ಷ ಬಿ.ಜೆ.ಮಹೇಶ್‌, ವೈದ್ಯರಾದ ಡಾ.ಜಿ.ಎಸ್‌.ಅನಿಲ್‌ಕುಮಾರ್‌, ಡಾ.ಜಿ.ಕೆ. ಕರುಣಾಕರ, ಡಾ.ಹರ್ಷವರ್ಧನ, ಡಾ.ಪ್ರಶಾಂತ್‌ ಸಿದ್ಮಲ್‌, ಡಾ.ಪ್ರಭಾ, ಡಾ.ಹೇಮಂತ್‌ಕುಮಾರ್‌, ಡಾ.ಅಭಿಷೇಕ್‌ಗೌಡ, ಕಾಲಭೈರವೇಶ್ವರ ಜನಸ್ನೇಹಿ ಟ್ರಸ್ಟ್‌ನ ಅಧ್ಯಕ್ಷ ಜಿ.ಟಿ.ಜಯಕುಮಾರ್‌, ಕಾರ್ಯದರ್ಶಿ ಜಿ.ಪಿ.ಚೇತನ್‌ಕುಮಾರ್‌, ಉಪಾಧ್ಯಕ್ಷ ಜಿ.ಪಿ. ಪ್ರಸನ್ನಕುಮಾರ್‌, ಮುಖಂಡರಾದ ಮಹೇಂದ್ರ ಗೌಡಗೆರೆ, ಶಶಿಕುಮಾರ್‌, ತಮ್ಮಣ್ಣ, ಟ್ರಸ್ಟ್‌ನ ಪದಾಧಿಕಾರಿಗಳು, ಗ್ರಾಮಸ್ಥರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next