Advertisement

Bengaluru: ರಸ್ತೇಲಿ ಕುಡೀಬೇಡಿ ಎಂದಿದ್ದಕ್ಕೆ ದಂಪತಿಗೆ ಹಿಗ್ಗಾಮುಗ್ಗಾ ಥಳಿತ!

09:47 AM Oct 29, 2024 | Team Udayavani |

ಬೆಂಗಳೂರು: ಸಾರ್ವಜನಿಕ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ದಂಪತಿ ಮೇಲೆ ಚಾಕು, ಇಟ್ಟಿಗೆಯಿಂದ ಹಲ್ಲೆ ನಡೆಸಿ ಕಾರು ಜಖಂಗೊಳಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿಯ ತುಂಗಾ ನಗರ ನಿವಾಸಿ ಶಿವಗಂಗೇಗೌಡ (38) ಮತ್ತು ಅವರ ಪತ್ನಿ ಜಯಲಕ್ಷ್ಮೀ (35) ಹಲ್ಲೆಗೊಳಗಾದವರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ದಂಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಶಿವಗಂಗೇಗೌಡ ನೀಡಿದ ದೂರಿನ ಮೇರೆಗೆ ಧನು, ಆನಂದ, ಸಂಜು ಹಾಗೂ ಇತರರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ದೂರುದಾರ ಶಿವಗಂಗೇಗೌಡ ತಮ್ಮ ಮನೆ ಬಳಿ ರಸ್ತೆ ಪಕ್ಕದಲ್ಲಿ ತಮ್ಮ ಇನೋವಾ ಕಾರು ಪಾರ್ಕ್‌ ಮಾಡಿದ್ದರು. ಭಾನುವಾರ ರಾತ್ರಿ ಸುಮಾರು 7 ಗಂಟೆಗೆ ಆರೋಪಿಗಳಾದ ಸಂಜು, ಆನಂದ, ಧನು ಕಾರಿನ ಪಕ್ಕದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಿದ್ದರು. ಅದನ್ನು ಮನೆಯ ಕಿಟಕಿಯಿಂದ ನೋಡಿದ ಶಿವಗಂಗೇ ಗೌಡ, ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದೀರಿ. ಇಲ್ಲಿಂದ ಎದ್ದು ಹೋಗಿ ಎಂದು ಹೇಳಿದ್ದಾರೆ.

ಎದ್ದು ಹೋಗುತ್ತೇವೆ ಎಂದ ಆರೋಪಿಗಳು ನಂತರವೂ ಅಲ್ಲಿಯೇ ಕುಳಿತು ಮದ್ಯ ಸೇವನೆ ಮುಂದುವರೆಸದ್ದಾರೆ. ರಾತ್ರಿ 9 ಗಂಟೆಗೆ ಶಿವಗಂಗೇಗೌಡ ತಮ್ಮ ನಾಯಿಯನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಆಗಲೂ ಆರೋಪಿಗಳು ಅಲ್ಲೇ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಇಲ್ಲಿಂದ ಎದ್ದು ಹೋಗಿ ಎಂದು ಶಿವಗಂಗೇಗೌಡ ಬುದ್ಧಿವಾದ ಹೇಳಿದ್ದಾರೆ.

Advertisement

ಅಷ್ಟಕ್ಕೆ ಕೆರಳಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಶಿವಗಂಗೇಗೌಡರನ್ನು ನಿಂದಿಸಿ, ಮೊಬೈಲ್‌ ಕರೆ ಮಾಡಿ ಐದಾರು ಮಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಜಗಳ ಮಾಡಿದ್ದಾರೆ. ಇದೇ ವೇಳೆ ಆರೋಪಿಗಳ ಪೈಕಿ ಒಬ್ಟಾತ ಚಾಕುವಿ ನಿಂದ ಶಿವಗಂಗೇಗೌಡರನ್ನು ಕೊಲೆಗೆ ಯತ್ನಿಸಿದ್ದು, ಕೂಡಲೇ ಕೈನಿಂದ ಚಾಕು ಹಿಡಿದ ಪರಿಣಾಮ ಕೈಗೆ ಗಾಯವಾಗಿದೆ. ಬಳಿಕ ಆರೋಪಿ ಚಾಕುವಿನಿಂದ ಎಡ ತೋಳಿಗೆ ಚುಚ್ಚಿದ್ದಾನೆ. ಉಳಿದ ಆರೋಪಿಗಳು ಕ್ರಿಕೆಟ್‌ ಬ್ಯಾಟ್‌, ಸಿಮೆಂಟ್‌ ಇಟ್ಟಿಗೆಯಿಂದ ಶಿವಗಂಗೇಗೌಡರ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಗೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಹೊರಗೆ ಬಂದ ಜಯಜಯಲಕ್ಷ್ಮೀ ಮೇಲೂ ಆರೋಪಿಗಳು ಕ್ರಿಕೆಟ್‌ ಬ್ಯಾಟ್‌ ಹಾಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಶಿವಗಂಗೇಗೌಡರರ ಇನೋವಾ ಕಾರಿನ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಜಖಂಗೊಳಿಸಿದ್ದಾರೆ.

ಹಲ್ಲೆಯಿಂದ ಕುಸಿದು ಬಿದ್ದ ಶಿವಗಂಗೇಗೌಡ ಮತ್ತು ಜಯಲಕ್ಷ್ಮೀಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next