Advertisement

ನಾಲ್ಕೇ ವರ್ಷದಲ್ಲಿ ಶಾಲೆ ಕಟ್ಟಡ ಶಿಥಿಲ

03:45 PM Jan 05, 2018 | Team Udayavani |

ದೇವದುರ್ಗ: ಪಟ್ಟಣದ ಅಲೆಮಾರಿ ಜನಾಂಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಮಾಳಗಡ್ಡಿ ಸರ್ಕಾರಿ ಕಿರಿಯ
ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಿಸಿದ ನಾಲ್ಕು ವರ್ಷದಲ್ಲೇ ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕದಲ್ಲೇ
ಕಾಲ ಕಳೆಯುವಂತಾಗಿದೆ.

Advertisement

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2011-12ನೇ ಸಾಲಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಎರಡು ಕೋಣೆಗಳನ್ನು
ನಿರ್ಮಿಸಲಾಗಿದೆ. ಕಳಪೆ ಕಾಮಗಾರಿ ಪರಿಣಾಮ ಈಗಾಗಲೇ ಕೋಣೆ ಗೋಡೆ, ಮೇಲ್ಛಾವಣಿಯಲ್ಲಿ ಬಿರುಕು
ಕಾಣಿಸಿಕೊಂಡಿವೆ. ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ ಒಂದು ಕೋಣೆಗೆ ಈಗಾಗಲೇ ಬೀಗ ಜಡಿಯಲಾಗಿದೆ.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 54 ಮಕ್ಕಳು ಇದ್ದು, ಒಂದೇ ಕೋಣೆಯಲ್ಲಿ ಅತಿಥಿ ಶಿಕ್ಷಕಿ ಸೇರಿ ಮೂರು ಜನ
ಶಿಕ್ಷಕಿಯರು ಪಾಠ ಬೋಧಿಸುತ್ತಿದ್ದಾರೆ. ಒಂದೇ ಕೋಣೆಯಲ್ಲಿ 5 ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ
ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.

ಮಾಳಗಡ್ಡಿ ಶಾಲೆಯಲ್ಲಿ ಬಹುತೇಕ ಅಲೆಮಾರಿ ಜನಾಂಗದ ಮಕ್ಕಳಿದ್ದಾರೆ. ಜಾತ್ರೆ, ಮದುವೆ ಸಮಾರಂಭವಿದ್ದರೆ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಾರೆ. ಶಿಕ್ಷಕಿಯರು ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಯತ್ತ ಕರೆತರುವಲ್ಲಿ ಶ್ರಮಿಸುತ್ತಿದ್ದಾರೆ.

ಮೂಲ ಸೌಕರ್ಯ ಮರೀಚಿಕೆ: ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್‌ ಸೇರಿ ಅಗತ್ಯ ಮೂಲ
ಸೌಕರ್ಯಗಳು ಇಲ್ಲ. ಬಿಸಿಯೂಟ ಸೇವಿಸಿದ ಬಳಿಕ ನೀರು ಕುಡಿಯಲು ಮಕ್ಕಳು ಮನೆಗಳಿಗೆ ತೆರಳುತ್ತಾರೆ. ಶಾಲೆ ಪಕ್ಕದಲ್ಲಿ ಬೆಳೆದ ಜಾಲಿಗಿಡಗಳೇ ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಆಸರೆ ಆಗಿವೆ.

Advertisement

ಮಾಳಗಡ್ಡಿ ನಿವೇಶನದಲ್ಲಿ ಮನೆ, ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಭೂಮಿ ಯೋಗ್ಯವಿಲ್ಲ ಎಂದು ಈಗಾಗಲೇ
ಇಂಜಿನೀಯರ್‌ಗಳು ಪುರಸಭೆ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಹೀಗಿದ್ದರೂ ಶಾಲಾ ಕಟ್ಟಡ ನಿರ್ಮಿಸುವ ವೇಳೆ
ಯಾರೊಬ್ಬರೂ ಬಿಇಒ ಅಥವಾ ಶಾಲೆ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿಲ್ಲ. ಹೀಗಾಗಿ ನಿರ್ಮಿಸಿದ ನಾಲ್ಕು ವರ್ಷದಲ್ಲೇ
ಕಟ್ಟಡಗಳು ಶಿಥಿಲಗೊಂಡಿವೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಈಗಿನ ಮುಖ್ಯ ಶಿಕ್ಷಕಿ ಕಟ್ಟಡಗಳ ದುರಸ್ತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನಾಲ್ಕು ಪತ್ರ ಬರೆದಿದ್ದಾರೆ. ಜಿಪಂ, ಪುರಸಭೆ ಕಚೇರಿಗೆ ಅಲೆದು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಶಿಥಿಲಗೊಂಡ ಶಾಲಾ ಕಟ್ಟಡಗಳಿಗೆ ಅನುದಾನ ಸರಕಾರ ಮಟ್ಟದಿಂದಲೇ ಬಿಡುಗಡೆಯಾಗಬೇಕು. ಶಾಲಾಭಿವೃದ್ಧಿ ನಿರ್ವಹಣೆ ಅನುದಾನ ಶಿಕ್ಷಣ ಇಲಾಖೆಯಿಂದ
ಮಂಜೂರಿ ಬಿಟ್ಟರೆ ದುರಸ್ತಿಗಾಗಿ ಸರಕಾರವೇ ಕಣ್ಣು ತೆರೆಯಬೇಕಿದೆ.

ಶಾಲಾ ಕಟ್ಟಡ ದುರಸ್ತಿಗಾಗಿ ನಾಲ್ಕು ಜನ ಬಿಇಒಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಪಂ, ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಐದು ತರಗತಿಗಳ ಮಕ್ಕಳಿಗೆ ಒಂದೇ ಕೋಣೆಯಲ್ಲಿ ಪಾಠ ಪ್ರವಚನ ಮಾಡಬೇಕಾದ
ಅನಿವಾರ್ಯತೆ ಇದೆ. ಸರಕಾರದಿಂದ ಅನುದಾನ ಬಂದ ಬಳಿಕ ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ ಎಂದು
ಅಧಿಕಾರಿಗಳು ಹೇಳುತ್ತಾರೆ.  ಮಂಜುಳಾ , ಮುಖ್ಯ ಶಿಕ್ಷಕಿ

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಟ್ಟಡಗಳು ನೆಲಸಮ, ದುರಸ್ತಿಗೊಳಿಸಲು ಈಗಾಗಲೇ ಪಟ್ಟಿ ತಯಾರಿಸಿ ಮೇಲಾಧಿ ಕಾರಿಗಳಿಗೆ ಕಳಿಸಲಾಗಿದೆ. ಸರಕಾರದ ಮಟ್ಟದಿಂದಲೇ ಅನುದಾನ
ಬಿಡುಗಡೆಯಾಗಬೇಕಿದೆ.
 ಎಸ್‌.ಎಂ. ಹತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ದೇವದುರ್ಗ

Advertisement

Udayavani is now on Telegram. Click here to join our channel and stay updated with the latest news.

Next