ಹುಣಸೂರು: ಮಿಂಚಿನ ಕಾರ್ಯಾಚರಣೆ ನಡೆಸಿ, ವಿವಿಧೆಡೆ ನಡೆಸಿದ್ದ ದರೋಡೆ, ಕಳ್ಳತನ ಸೇರಿದಂತೆ 7 ಪ್ರಕರಣವನ್ನು ಭೇಧಿಸಿರುವ ಹುಣಸೂರು ನಗರ ಠಾಣೆ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ವಾಹನ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ತಾಲೂಕಿನ ರತ್ನಪುರಿಯ ರಫೀಕ್, ನಿಷಾಧ್, ರೋಹನ್, ಫಯಾಜ್ ಬಂಧಿತ ಆರೋಪಿಗಳು. ಇವರು ನಡೆಸಿದ್ದ ಒಂದು ದರೋಡೆ, ಒಂದು ಬೈಕ್ ಕಳ್ಳತನ, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ದನಗಳ ಕಳ್ಳತನ ಹಾಗೂ ನಗರ ವ್ಯಾಪ್ತಿಯ ಎರಡು ಕಡೆ ಜಾನುವಾರುಗಳ ಕಳ್ಳತನವನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ
2021ರ ಡಿಸೆಂಬರ್ 26 ರಂದು ನಗರದ ಹಾಳಗೆರೆ ಜಂಕ್ಷನ್ ಬಳಿ ಮೈಸೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿ, ಕಾರನ್ನು ರಿಪೇರಿ ಮಾಡಿಸಿಕೊಡುವ ನೆಪದಲ್ಲಿ ನಗರದ ಹೊರವಲಯದಲ್ಲಿ ಅಪಹರಿಸಿ, ಚಾಲಕನಿಂದ ಹಣ ಹಾಗೂ ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಅಡಿಷನಲ್ ಎಸ್.ಪಿ. ಹಾಗೂ ಡಿವೈಎಸ್‌ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಿ.ವಿ.ರವಿ ನೇತೃತ್ವದ ತಂಡ ಪ್ರಕರಣವನ್ನು ಭೇಧಿಸಿದ್ದಲ್ಲದೆ, ವಿಚಾರಣೆವೇಳೆ ಒಂದು ಮೋಟಾರ್ ಬೈಕ್ ಕಳ್ಳತನ ಹಾಗೂ 7 ರಾಸುಗಳ ಕಳ್ಳತನ ಪತ್ತೆಹಚ್ಚಲಾಗಿದ್ದು, ಜಾನುವಾರುಗಳ ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಭಾಕರ್, ಪ್ರಸಾದ್, ಇರ್ಫಾನ್, ಪುಟ್ಟನಾಯಕ, ಭರತೇಶ್, ಚಾಲಕ ಅಲಿಂಪಾಷಾ ಭಾಗವಹಿಸಿದ್ದರು.