Advertisement

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

09:39 PM May 16, 2024 | Suhan S |

ಬೆಂಗಳೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದ್ದು, ಗೃಹ ಸಚಿವರು ಸೂಕ್ಷ್ಮತೆ ಹೊಂದಿದ್ದರೆ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಮಾಜಿ ಡಿಸಿಎಂ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರು ಸಂಪೂರ್ಣ ಅಸಹಾಯಕರಾಗಿದ್ದಾರೆ. ಯಾವ ಪೊಲೀಸ್‌ ಅಧಿಕಾರಿಯು  ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಜಡತ್ವವನ್ನು ಹೋಗಲಾಡಿಸಿ ಸರಿಪಡಿಸಬೇಕಾದ ತುರ್ತು ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸುತ್ತಿದೆ. ಈ ಅವಧಿಯಲ್ಲಿ ರಾಜ್ಯಾದ್ಯಂತ ಕೊಲೆ, ಸುಲಿಗೆ, ಮತಾಂಧ ಶಕ್ತಿಗಳ ವಿಜೃಂಭಣೆ, ತುಷ್ಟೀಕರಣದ ರಾಜಕಾರಣ ಹೆಚ್ಚಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಸಮರ್ಥ, ಅಭಿವೃದ್ಧಿ ಶೂನ್ಯ ಸರಕಾರ ರಾಜ್ಯದಲ್ಲಿದೆ. ಭ್ರಷ್ಟಾಚಾರ ವರ್ಗಾವಣೆ ದಂಧೆ ವ್ಯಾಪಕವಾಗಿದೆ. ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುವುದು ಜಗಜ್ಜಾಹೀರಾದ ಸಂಗತಿ ಎಂದು ಆರೋಪಿಸಿದರು.

ವರ್ಗಾವಣೆ, ಹುದ್ದೆ ನಿಯೋಜನೆಗೆ ಸರಕಾರದಲ್ಲಿ  “ರೇಟ್‌ ಕಾರ್ಡ್‌’ ನಿಗದಿಯಾಗಿದೆ. ಸಿಎಂ ಕಚೇರಿಯಿಂದ ಹಿಡಿದು ನಾನಾ ಕಚೇರಿಗಳು, ಶಾಸಕರು, ಎಲ್ಲರೂ ಮಧ್ಯವರ್ತಿಗಳ ಜತೆಗೂಡಿರುವಾಗ ಕಾನೂನು- ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ? ನಗರ ಹಾಗೂ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಮಾಹಿತಿಯನ್ವಯ ಅಪರಾಧ ಪ್ರಮಾಣ ಶೇ.60ಕ್ಕಿಂತ ಹೆಚ್ಚಾಗಿದೆ. ಹೆಣ್ಣು ಮಕ್ಕಳಿಗೆ ಸುರಕ್ಷೆಯೇ ಇಲ್ಲದಂತಾಗಿದೆ ಎಂದು ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಬಳಿಕ ಅಂಜಲಿ ಹತ್ಯೆ ನಡೆದಿದೆ. ಅಂಜಲಿ ಮನೆಯವರು ಯುವತಿಗೆ ಬೆದರಿಕೆ ಇರುವ ಬಗ್ಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅನುಭವಿ ಸಿಎಂ, ಸಚಿವರು ಇದ್ದರೂ ಉತ್ತಮ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.  ಸರಕಾರ ಇನ್ನಾದರೂ ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆಗಳನ್ನು ಸಂಘಟಿಸಲಿದೆ ಎಂದು ಹೇಳಿದರು. ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ವಕ್ತಾರ ಎಂ.ಜಿ.ಮಹೇಶ್‌ ಉಪಸ್ಥಿತರಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next