Advertisement

ಚಹಾ ಮಾರುತ್ತಿರುವ ಮಾಜಿ ಕ್ರಿಕೆಟಿಗ!

12:26 AM Jul 10, 2021 | Team Udayavani |

ಗುವಾಹಟಿ : ಭಾರತದ ಕ್ರಿಕೆಟಿಗರೆಲ್ಲ ಭಾರೀ ಶ್ರೀಮಂತರು, ಕೋಟ್ಯಧೀಶರು ಎಂಬುದು ಎಲ್ಲರ ಅಭಿಪ್ರಾಯ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ ಎಂಬುದಕ್ಕೆ ಅಸ್ಸಾಮ್‌ನ ಮಾಜಿ ಕ್ರಿಕೆಟಿಗ ಪ್ರಕಾಶ್‌ ಭಗತ್‌ ಅವರೇ ಸಾಕ್ಷಿ.

Advertisement

ಅಸ್ಸಾಮ್‌ನ ಎಡಗೈ ಸ್ಪಿನ್ನರ್‌ ಪ್ರಕಾಶ್‌ ಭಗತ್‌ 2002-03ರ ಋತುವಿನಲ್ಲಿ ನೆಟ್‌ ಬೌಲರ್‌ ಆಗಿ ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡಮಿಗೆ ಆಹ್ವಾನಿಸಲ್ಪಟ್ಟ ಕ್ರಿಕೆಟಿಗ. ಆಗ ತೆಂಡುಲ್ಕರ್‌, ಗಂಗೂಲಿ, ಲಕ್ಷ್ಮಣ್‌ ಅವರಂಥ ಘಟಾನುಘಟಿ ಬ್ಯಾಟ್ಸ್‌ ಮನ್‌ಗಳನ್ನು ಹೊಂದಿದ್ದ ಭಾರತ ತಂಡ ನ್ಯೂಜಿಲ್ಯಾಂಡ್‌ ಪ್ರವಾಸದ ತಯಾರಿಯಲ್ಲಿತ್ತು. ಅಲ್ಲಿ ಡೇನಿಯಲ್‌ ವೆಟೋರಿ ಅವರ ಸ್ಪಿನ್‌ ಎಸೆತಗಳನ್ನು ನಿಭಾಯಿಸಲು ಸೂಕ್ತ ಅಭ್ಯಾಸ ಲಭಿಸಲಿ ಎಂಬ ಕಾರಣಕ್ಕಾಗಿ ಭಗತ್‌ ಅವರನ್ನು ಎನ್‌ಸಿಎಗೆ ಕರೆಸಲಾಗಿತ್ತು.
“ಅಂದು ನಾನು ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರನ್ನೆಲ್ಲ ಭೇಟಿಯಾಗಿದ್ದೆ. ನೆಟ್‌ ಪ್ರ್ಯಾಕ್ಟೀಸ್‌ ವೇಳೆ ಗಂಗೂಲಿ, ತೆಂಡುಲ್ಕರ್‌, ಲಕ್ಷ್ಮಣ್‌ ಸೇರಿದಂತೆ ಎಲ್ಲರಿಗೂ ಬೌಲಿಂಗ್‌ ಮಾಡಿದ್ದೆ. ಇವರೊಂದಿಗೆ ತೆಗೆಸಿಕೊಂಡ ಫೊಟೋಗಳೂ ಇವೆ’ ಎಂದು ಎರಡು ದಶಕಗಳ ಹಿಂದಿನ ಗಳಿಗೆಯನ್ನು ನೆನಪಿಸಿ ಕೊಂಡು ಕಣ್ಣರಳಿಸುತ್ತಾರೆ ಭಗತ್‌. ಜತೆಗೆ ಆ ಕಣ್ಣಂಚಿನಲ್ಲಿ ಹೌದೋ ಅಲ್ಲವೋ ಎಂಬಂತೆ ನೀರು ಕೂಡ ಕಾಣಿಸಿಕೊಳ್ಳು ತ್ತದೆ. ಮರು ಗಳಿಗೆಯಲ್ಲೇ ಅವರು ಗ್ರಾಹಕರಿಗೆ ಚಹಾ ನೀಡಿ ಮಾತು ಮುಂದುವರಿಸುತ್ತಾರೆ…

ಅಮ್ಮನೊಂದಿಗೆ ದುಡಿಮೆ
ಹೌದು, ಪ್ರಕಾಶ್‌ ಭಗತ್‌ ನಿಂತದ್ದು ಅಸ್ಸಾಮ್‌ನ ಸಿಲ್ಕಾರ್‌ ಪಟ್ಟಣದ ಇಟಾಖೋಲದ ರಸ್ತೆ ಬದಿಯ ಸಣ್ಣ ಟೀ ಸ್ಟಾಲ್‌ನಲ್ಲಿ! ಇದು ಅವರ ತಂದೆ ನಡೆಸುತ್ತಿದ್ದ ಸ್ಟಾಲ್‌. ಆದರೆ ಅವರು 2011ರಲ್ಲಿ ಹೃದಯಾಘಾತಕ್ಕೆ ಒಳಗಾದರು. ಅಣ್ಣನ ಆರೋಗ್ಯವೂ ಸರಿ ಇಲ್ಲ. ಜವಾಬ್ದಾರಿಯೆಲ್ಲ ಭಗತ್‌ ಹೆಗಲೇರಿತು. ಆರ್ಥಿಕವಾಗಿ ತೀರಾ ಹಿಂದುಳಿದಿರುವ, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಭಗತ್‌ ಕುಟುಂಬಕ್ಕೆ ಈ ಸ್ಟಾಲೇ ಈಗ ಆಸರೆ. ಟೀ, ಕಾಫಿ ಮತ್ತು ಫಾಸ್ಟ್‌ ಫ‌ುಡ್‌ ತಯಾರಿಸಲು ತಾಯಿಯೂ ನೆರವಿಗೆ ನಿಲ್ಲುತ್ತಾರೆ. ಇಬ್ಬರದೂ ವಿಶ್ರಾಂತಿ ಇಲ್ಲದ ದುಡಿಮೆ.

“ಕ್ರಿಕೆಟ್‌ನಲ್ಲಿ ಮುಂದುವರಿಯಲು ಅಭ್ಯಾಸದ ಕೊರತೆ ಕಾಡಿತು. ಆದರೆ ಬದುಕು ಸಾಗಲೇ ಬೇಕಿತ್ತು. ಮೊದಲು ಕಂಪೆನಿಯೊಂದರಲ್ಲಿ ದುಡಿಯು ತ್ತಿದ್ದೆ. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡೆ. ಈಗ ಈ ಸ್ಟಾಲ್‌ ಕೈ ಹಿಡಿದಿದೆ…’ ಎನ್ನುತ್ತಾರೆ 34 ವರ್ಷದ ಪ್ರಕಾಶ್‌ ಭಗತ್‌.

ಹ್ಯಾಟ್ರಿಕ್‌ ಹೀರೋ!
2009-2011ರ ಅವಧಿಯಲ್ಲಿ ಅಸ್ಸಾಮ್‌ ಪರ ರಣಜಿ ಆಡಿದ್ದ ಪ್ರಕಾಶ್‌ ಭಗತ್‌, ಅಂಡರ್‌-17 ವಿಜಯ್‌ ಮರ್ಚಂಟ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಬಿಹಾರ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಪರಾಕ್ರಮಿ. ಅಂತರ್‌ ಜಿಲ್ಲಾ ಚಾಂಪಿಯನ್‌ಶಿಪ್‌ನಲ್ಲಿ ಸಿಲ್ಕಾರ್‌ ಜಿಲ್ಲಾ ತಂಡಕ್ಕೆ “ನೂರುದ್ದೀನ್‌ ಟ್ರೋಫಿ’ ತಂದಿತ್ತ ನಾಯಕನೂ ಹೌದು. ಈಗ ಮಾತ್ರ…

Advertisement
Advertisement

Udayavani is now on Telegram. Click here to join our channel and stay updated with the latest news.

Next