ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್, ಜೆಡಿಎಸ್ ಮುಖಂಡ ಗೋವಿಂದೇಗೌಡ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಲ್ಲೇಶ್ವರ ಉಪವಿಭಾಗದ ಎಸಿಪಿ ಆನಂದ್ ಬಡಿಗೇರ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ತನಿಖಾ ತಂಡಗಳು, ಗೋವಿಂದೇಗೌಡ ಅವರ ಹತ್ಯೆ ನಡೆದ ಮಾತ್ರೋಶ್ರೀ ಕಲ್ಯಾಣ ಮಂಟಪದಲ್ಲಿರುವ ಸಿಸಿಟಿವಿ ಫೂಟೇಜ್ ಆಧಾರದಲ್ಲಿ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಶಕ್ಕೆ ಪಡೆದವರ ಪೈಕಿ ಕೆಲವರ ಮುಖ ಚಹರೆ ಹಾಗೂ ಸಿಸಿಟಿವಿ ಪೂಟೇಜ್‌ನಲ್ಲಿರುವ ವ್ಯಕ್ತಿಗಳಿಳ ಚಹರೆಗೂ ಹೋಲಿಕೆಯಾಗಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಮಾಹಿತಿ ಕಲೆಹಾಕಲಾಗಿದೆ. ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿರುವ ಸಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇನ್ನು ಗೋವಿಂದೇಗೌಡರ ಹತ್ಯೆಯಾದ ಬಳಿಕ ರಾಜಕೀಯ ವೈಷಮ್ಯದಿಂದ ಜಗಳಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ವರ್ಷ ಕೊಲೆಯಾಗಿದ್ದ ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅವರ ಮನೆಯ ಸುತ್ತಮುತ್ತಲೂ ಕೆಎಸ್‌ಆರ್‌ಪಿ ತುಕಡಿ ಹಾಗೂ ಹೆಗ್ಗನಹಳ್ಳಿಯ ಕೆಲ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆ ಕಲ್ಪಿಸಲಾಗಿದೆ.
ಪತ್ನಿಯಿಂದ ದೂರು: ಇನ್ನು ಗೋವಿಂದೇಗೌಡರ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಅವರ ಪತ್ನಿ ವರಲಕ್ಷ್ಮೀ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗೋವಿಂದೇಗೌಡರ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಹೆಗ್ಗನಹಳ್ಳಿಯ ನಿವಾಸದ ಬಳಿ ಒಂದು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಅಂತ್ಯ ಸಂಸ್ಕಾರಕ್ಕಾಗಿ ಹುಟ್ಟೂರಾದ ಮಾಗಡಿ ಹೆಬ್ಬೂರಿಗೆ ಕೊಂಡೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದರು.
ಪ್ರತೀಕಾರವಾಗಿ ಹತ್ಯೆ ನಡೆದಿರುವ ಶಂಕೆ!: ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಕೊಲೆಗೆ ಸುಫಾರಿ ನೀಡಿದ್ದ ಗೋವಿಂದೇಗೌಡ ಹಾಗೂ ಪತ್ನಿ ವರಲಕ್ಷ್ಮೀ ಜಾಮೀನಿನ ಆಧಾರದಲ್ಲಿ ಹೊರಗೆ ಬಂದಿದ್ದರು. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮುಸುಕಿನ ಹಗೆತನ ತಾಂಡವಾಡುತ್ತಿತ್ತು. ಹೀಗಾಗಿ, ಚಿಕ್ಕತಿಮ್ಮೇಗೌಡ ಹತ್ಯೆಗೆ ಪ್ರತಿಯಾಗಿ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.