ನವ ದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಟಿಕೆಟ್ ನೀಡದಿದ್ದಕ್ಕಾಗಿ ಅತೃಪ್ತರಾದ ದೆಹಲಿಯ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಟವರ್ ಏರಿ ಎಲ್ಲರ ಆತಂಕಕ್ಕೆ ಕಾರಣವಾದ ಘಟನೆ ಭಾನುವಾರ ನಡೆದಿದೆ.
ಎಎಪಿ ಮಾಜಿ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಮುಂಬರುವ ಎಂಸಿಡಿ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಅತೃಪ್ತರಾಗಿ ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ಟ್ರಾನ್ಸ್‌ಮಿಷನ್ ಟವರ್ ಅನ್ನು ಏರಿದ್ದಾರೆ.
ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು, ಕೆಳಗಿಳಿಯುವಂತೆ ಮನವೊಲಿಸುತ್ತಿದ್ದಾರೆ.
ದೆಹಲಿ ಎಂಸಿಡಿ ಚುನಾವಣೆಗೆ ಎಎಪಿ ತನ್ನ 134 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 134 ರ ಪಟ್ಟಿಯಲ್ಲಿ 70 ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದು, ಮಾಜಿ ಶಾಸಕ ವಿಜೇಂದರ್ ಗರ್ಗ್ ಅವರನ್ನು ಎಂಸಿಡಿ ಚುನಾವಣೆಯಲ್ಲಿ ನರೈನಾದಿಂದ ಎಎಪಿ ಕಣಕ್ಕಿಳಿಸಿದೆ.
ಮತ್ತೊಂದೆಡೆ, ಕಾಂಗ್ರೆಸ್‌ನಿಂದ ಆಪ್‌ಗೆ ಬಂದಿರುವ ದೆಹಲಿಯ ಹಿರಿಯ ಕೌನ್ಸಿಲರ್ ಮುಖೇಶ್ ಗೋಯಲ್ ಅವರು ಆದರ್ಶ ನಗರ ವಾರ್ಡ್‌ನಿಂದ ಚುನಾವಣಾ ಕಣದಲ್ಲಿದ್ದಾರೆ. ತಿಮಾರ್‌ಪುರದ ಮಲ್ಕಗಂಜ್‌ನಿಂದ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಗುದ್ದಿದೇವಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
2ನೇ ಪಟ್ಟಿಯಲ್ಲಿ 117 ಅಭ್ಯರ್ಥಿಗಳು
ಡಿಸೆಂಬರ್ 4 ರಂದು ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಪ್ ಶನಿವಾರ ತನ್ನ 117 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.