Advertisement

ಗಡಿರೇಖೆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ

12:15 AM Feb 27, 2021 | Team Udayavani |

ಹೊಸದಿಲ್ಲಿ: “ಭಾರತ- ಚೀನ ನಡುವಿನ ಗಡಿರೇಖೆ ಮರು ಗುರುತು ಪ್ರಶ್ನೆ ಬಗೆಹರಿಸಲು ಇನ್ನೂ ಸಮಯ ಬೇಕಾಗಬಹುದು. ಆದರೆ ಅದಕ್ಕಿಂತ ಮೊದಲು ಗಡಿಯಲ್ಲಿನ ಶಾಂತಿ- ನೆಮ್ಮದಿಗೆ ಭಂಗ ತರುವ ಪ್ರಯತ್ನಗಳು, ಸಂಘರ್ಷಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ರೂಪಿಸಬೇಕಿದೆ’ ಎಂದು ವಿದೇಶಾಂಗ ಸಚಿವ  ಎಸ್‌. ಜೈಶಂಕರ್‌ ಪ್ರತಿಪಾದಿಸಿದರು.

Advertisement

ಪ್ಯಾಂಗಾಂಗ್‌ ತ್ಸೋದಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಚೀನದ ವಿದೇಶಾಂಗ ಸಚಿವ ವ್ಯಾಂಗ್‌ ಯಿ ಜತೆ 73 ನಿಮಿಷಗಳ ಕಾಲ ಜೈಶಂಕರ್‌ ದೂರವಾಣಿ ಸಂಭಾಷಣೆ ನಡೆಸಿ, ಲಡಾಖ್‌ ಎಲ್‌ಎಸಿಯ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿದ್ದಾರೆ. “ಭಾರತ- ಚೀನ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಲು ಗಡಿಯಲ್ಲಿ ಶಾಂತಿ ಮತ್ತೆ ನೆಮ್ಮದಿಗಳ ಮರುಸ್ಥಾಪನೆ ಅತ್ಯವಶ್ಯ. ಪ್ಯಾಂಗಾಂಗ್‌ನ ಬಳಿಕ ಈಗ ಮುಂದಿನ ಬಿಕ್ಕಟ್ಟಿನ ಪ್ರದೇಶಗಳತ್ತ ಉಭಯ ರಾಷ್ಟ್ರಗಳು ತುರ್ತು ಗಮನಹರಿಸಬೇಕಿದೆ’ ಎಂದು ಹೇಳಿದ್ದಾರೆ.

ಹಾಟ್‌ಲೈನ್‌ ಸಂಪರ್ಕ: ಸಮಯೋಚಿತ ವೀಕ್ಷಣೆಗಳ ವಿನಿಮಯಕ್ಕೆ ಹಾಟ್‌ಲೈನ್‌ ಸಂಪರ್ಕ ಆರಂಭಿಸಲು ಉಭಯ ರಾಷ್ಟ್ರಗಳೂ ಫೋನ್‌ ಮಾತುಕತೆಯಲ್ಲಿ ಒಪ್ಪಿಗೆ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ.

ಚೀನ- ಪಾಕ್‌ ನಿಲುವಿಗೆ ಬೈಡೆನ್‌ ಕಾರಣ? :

ಎಲ್‌ಎಸಿಯಲ್ಲಿ ಸೇನೆ ಹಿಂತೆಗೆದುಕೊಂಡ ಚೀನ, ಇತ್ತ ಎಲ್‌ಒಸಿಯಲ್ಲಿ ಶಾಂತಿಗೆ ಕೈಜೋಡಿಸಿದ ಪಾಕಿಸ್ಥಾನ‌… ಭಾರತ ವಿರುದ್ಧದ ಪರಮಾಣು ಎದುರಾಳಿ ರಾಷ್ಟ್ರಗಳ ನಿಲುವು ಹೀಗೆ ದಿಢೀರ್‌ ಬದಲಾಗಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕಾರಣ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ. ಪ್ರಸ್ತುತ ಈ ಮೂರೂ ರಾಷ್ಟ್ರಗಳಿಗಾಗಿ ಅಮೆರಿಕ ಪ್ರತ್ಯೇಕ ರಾಜತಾಂತ್ರಿಕ ನೀತಿಗಳನ್ನು ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ- ಚೀನ, ಭಾರತ- ಪಾಕ್‌ ನೇರ ಮಾತುಕತೆ ಮೂಲಕ ಗಡಿಬಿಕ್ಕಟ್ಟು ಬಗೆಹರಿಸಿಕೊಳ್ಳುವ ಕುರಿತು ಜೋ ಬೈಡೆನ್‌ ಸರಕಾರ ಇತ್ತೀಚೆಗಷ್ಟೇ ಪ್ರತಿಪಾದಿಸಿತ್ತು.

Advertisement

ಚೀನ ಮಣಿಸಿದ ಭಾರತ ಲಸಿಕೆ :

ಕೋವಿಡ್ ದಿಂದ ಕಂಗೆಟ್ಟ ಏಷ್ಯಾ- ಆಫ್ರಿಕಾದ ರಾಷ್ಟ್ರಗಳನ್ನು ಚೀನಕ್ಕೂ ಮೊದಲೇ ಭಾರತ ಕೈಹಿಡಿದಿದೆ. ಕೊರೊನಾ ಹರಡಿಸಿದ್ದಲ್ಲದೆ, ಆ ಬಡರಾಷ್ಟ್ರಗಳಿಗೆ ಸಾಲ ನೀಡಿ, ಮಾರುಕಟ್ಟೆ ಮೂಲಕ ಮತ್ತಷ್ಟು ಅವಲಂಬಿಯನ್ನಾಗಿಸುವ ಚೀನದ ಪಿತೂರಿಗೆ ಭಾರತದ “ವ್ಯಾಕ್ಸಿನ್‌’ ರಾಮಬಾಣ ಬಿಟ್ಟಿದೆ. ಚೀನಕ್ಕೂ ಮೊದಲೇ ಅದು ವ್ಯಾಪಕ ಸಾಲ ನೀಡಿದ ರಾಷ್ಟ್ರಗಳಿಗೆ ಭಾರತ ವ್ಯಾಕ್ಸಿನ್‌ ನೀಡಿ, ಔದಾರ್ಯ ಮೆರೆದಿದೆ. ಚೀನಿ ಲಸಿಕೆ ನಿರೀಕ್ಷಿಸುತ್ತಿದ್ದ ನೇಪಾಲ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಭಾರತದ ಲಸಿಕೆಗಳು ತಲುಪಿ, ವಿಶ್ವಾಸ ಸಂಪಾದಿಸಿವೆ. ಆಫ್ರಿಕಾದ ಬಡರಾಷ್ಟ್ರಗಳಲ್ಲೂ ಭಾರತದ ಲಸಿಕೆ ಬಗ್ಗೆ ನಂಬಿಕೆ ಹೆಚ್ಚಿದೆ.  ಬಡರಾಷ್ಟ್ರಗಳಿಗೆ ಚೀನ 3 ಲಕ್ಷ ಡೋಸ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಆದರೆ ಅದಕ್ಕೂ ಮುನ್ನವೇ ಭಾರತ 17 ಲಕ್ಷ ಡೋಸ್‌ಗಳನ್ನು ಬಡರಾಷ್ಟ್ರಗಳಿಗೆ ಪೂರೈಸಿದೆ. ಚೀನಿ ಲಸಿಕೆಗಳು ಇನ್ನೂ ಹೊರರಾಷ್ಟ್ರಗಳನ್ನು ತಲುಪಿಲ್ಲ. ಲಸಿಕೆ ಪ್ರಯೋಗದ ವೇಳೆ ದತ್ತಾಂಶ ನಿಗೂಢತೆ ಕಾಪಾಡಿಕೊಂಡಿರುವುದೇ ಚೀನ ಲಸಿಕೆಗಳಿಗೆ ದೊಡ್ಡ ಹಿನ್ನಡೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next