ಮುಂಬಯಿ : ಫಾರೀನ್ ಕ್ರಿಕೆಟ್ ಪ್ರವಾಸದ ವೇಳೆ ತಮ್ಮ ಪತ್ನಿಯರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂದಿಟ್ಟಿರುವ ಬೇಡಿಕೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
“ಸಾಗರೋತ್ತರ ಕ್ರಿಕೆಟ್ ಪ್ರವಾಸದ ವೇಳೆ ಕ್ರಿಕೆಟಿಗರಿಗೆ ತಮ್ಮ ಪತ್ನಿಯರನ್ನು ಇಲ್ಲವೇ ಗರ್ಲ್ ಫ್ರೆಂಡ್‌ಗಳನ್ನು ಕರೆದೊಯ್ಯುವುದಕ್ಕೆ ಅವಕಾಶ ನೀಡಬೇಕು’ ಎಂದು ನಾಯಕ ಕೊಹ್ಲಿ ಮಾಡಿರುವ ಮನವಿಯನ್ನು ಬಿಸಿಸಿಐ ಒಪ್ಪಿಕೊಂಡಿರುವುದಾಗಿ ಬಿಸಿಸಿಐ ಮೂಲಗಳನ್ನು ಉಲ್ಲೇಖೀಸಿರುವ ಮಾಧ್ಯಮ ವರದಿಗಳು ತಿಳಿಸಿವೆ.
ಹಾಗಿದ್ದರೂ ಯಾವುದೇ ಸಾಗರೋತ್ತರ ಕ್ರಿಕೆಟ್ ಪ್ರವಾಸದ ಮೊದಲ ಹತ್ತು ದಿನಗಳ ಮಟ್ಟಿಗೆ ಮಾತ್ರವೇ ಈ ಅವಕಾಶವನ್ನು ಬಿಸಿಸಿಐ ಕಲ್ಪಿಸಲಿದೆ ಎಂದು ಮೂಲಗಳು ಹೇಳಿವೆ. ವಿದೇಶ ಪ್ರವಾಸದ ಆರಂಭದ ಹತ್ತು ದಿನಗಳ ಕಾಲ ಕ್ರಿಕೆಟಿಗರ ಪತ್ನಿಯರು, ಗರ್ಲ್ ಫ್ರೆಂಡ್ ಗಳು ಕ್ರಿಕೆಟಿಗರ ಜತೆಗೆ ಇರುವುದರಿಂದ ಯಾವುದೇ ತೊಂದರೆ, ಹಾನಿ ಉಂಟಾಗದು ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.
ಬಿಸಿಸಿಐ ನಿಂದ ಈ ಬಗ್ಗೆ ಈಗಿನ್ನೂ ಅಧಿಕೃತ ದೃಢೀಕರಣ ಪ್ರಕಟವಾಗಬೇಕಷ್ಟೇ .
ಸಾಗರೋತ್ತರ ಕ್ರಿಕೆಟ್ ಪ್ರವಾಸದ ವೇಳೆ ಕ್ರಿಕೆಟಿಗರು ತಮ್ಮ ಪತ್ನಿ ಮತ್ತು ಕುಟುಂಬದವರನ್ನು ತಮ್ಮ ಜತೆಗೆ ಕರೆದೊಯ್ಯುವ ವಿಷಯವು ಕ್ರಿಕೆಟ್ ಆಡಳಿತ ಸಮಿತಿ, ಬಿಸಿಐ ಆಯ್ಕೆಗಾರರು ಮತ್ತು ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರೀ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾಣೆ ಅವರನ್ನು ಒಳಗೊಂಡ ಭಾರತೀಯ ತಂಡ ವ್ಯವಸ್ಥಾಪಕ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಆಗ ಕೊಹ್ಲಿ ಮುಂದಿಟ್ಟ ಬೇಡಿಕೆಗೆ ಬಿಸಿಸಿಐ ತಾತ್ವಿಕ ಒಪ್ಪಿಗೆ ನೀಡಿತ್ತು ಎಂದು ವರದಿಗಳು ತಿಳಿಸಿವೆ.