ಬಂಟ್ವಾಳ: ಸಮಾಜದಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ದೊರೆಯುವಂತಾಗಬೇಕು. ಇದರಿಂದ ಎಲ್ಲರ ಜತೆ ಗುರುತಿಸಿಕೊಂಡು ಸೇವೆ ಸಲ್ಲಿಸಲು ಅವಕಾಶವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಫೆ. 24ರಂದು ಚೆಂಡ್ತಿಮಾರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಆದಿದ್ರಾವಿಡ ಸುಧಾರಕ ಸಂಘ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಹಿಂದುಳಿದ ಸಮಾಜದವರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಮುಂಚೂಣಿಗೆ ಬರಲು ಪ್ರಯತ್ನ ನಡೆಸಬೇಕು ಎಂದವರು ಹೇಳಿದರು.
ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಪ್ರೊ| ತುಕರಾಂ ಪೂಜಾರಿ ಮಾತನಾಡಿ, ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಹೆತ್ತವರನ್ನು ಮನೆಯಲ್ಲಿ ಉಳಿಸಿಕೊಂಡು ಪೋಷಿಸುವ ಮಕ್ಕಳ ಮನೋಸ್ಥಿತಿ ಕಡಿಮೆ ಆಗುತ್ತಿದೆ. ಹಿಂದೆಲ್ಲಾ ಹೆತ್ತವರಿಗೆ ಕೊನೆಯ ದಿನದ ತನಕ ಮಕ್ಕಳು ಸೇವೆ ನೀಡುತ್ತಿದ್ದರು. ಅವರನ್ನು ಗೌರವದಿಂದ ಕಾಣುತ್ತಿದ್ದರು. ಇಂದು ಹಲವಾರು ಮಕ್ಕಳು ಹೆತ್ತವರನ್ನು ನಿರ್ಲಕ್ಷ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಅಧ್ಯಕ್ಷ ಕೆ.ಕೃಷ್ಣಕುಮಾರ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಜೀಪಮೂಡ ಗ್ರಾ.ಪಂ.ಸದಸ್ಯ ರಮೇಶ್ ಪಣೋಲಿಬೈಲು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ , ಪುರಸಭಾ ಸದಸ್ಯ ಪ್ರವೀಣ್ ಜಕ್ರಿಬೆಟ್ಟು, ಮುತ್ತೂರು ಶ್ರೀ ಸತ್ಯಪದ್ನಾಜಿ ಸಾರ ಮುಪ್ಪಣ್ಣ ದೈವಸ್ಥಾನದ ಆಡಳಿತ ಮೊಕ್ತೇಸರ ಹರಿಯಪ್ಪ , ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶೀನ ಮೂಡಬಿದಿರೆ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಜನಾರ್ದನ ಚಂಡ್ತಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ ಚಂಡ್ತಿಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶೀನ ಚಂಡ್ತಿಮಾರ್ ವಂದಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.