Advertisement

ನೊರೆ ಸಮಸ್ಯೆ: ಸರ್ಕಾರಕ್ಕೆ ಎನ್‌ಜಿಟಿ ತರಾಟೆ

12:16 PM Jun 01, 2017 | Team Udayavani |

ನವದೆಹಲಿ: ಕೆರೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೂಮ್ಮೆ ಮುಖಭಂಗ! ಬೆಂಗಳೂರಿನ ಕೆರೆಗಳ ದುಸ್ಥಿತಿ ಬಗ್ಗೆ ವಿಚಾರಣೆ ನಡೆಸುವಾಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ರಾಜ್ಯ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದೆ.

Advertisement

ರಸ್ತೆಗೆ ಬರುತ್ತಿರುವ ನೊರೆಯಿಂದಾಗಿ ಆ ಭಾಗದಲ್ಲಿ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಮಹಾನಗರ ಪಾಲಿಕೆಗಳು ಏನು ಕ್ರಮ ತೆಗೆದುಕೊಳ್ಳುತ್ತಿವೆ ಎಂದು ಪ್ರಶ್ನಿಸಿದೆ.

“ಅಲ್ಲಿ ಏನಾಗುತ್ತಿದೆ? ಆ ಮಟ್ಟದ ನೊರೆ ಕೆರೆಯಿಂದ ಹೇಗೆ ಹೊರಬರುತ್ತಿದೆ? ನೊರೆಗೆ ಕಾರಣವಾದ ಅಂಶಗಳನ್ನು ಏಕೆ ತೆಗೆಯುತ್ತಿಲ್ಲ? ಅಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಇದರಿಂದಲೇ ಮತ್ತಷ್ಟು ವಾಯು ಮಾಲಿನ್ಯ ಉಂಟಾಗುತ್ತಿಲ್ಲವೇ?” ಎಂದು ಸರಣಿ ಪ್ರಶ್ನೆ ಕೇಳಿದೆ. 

“ಮೊದಲು ನೀವು ಕೆರೆಗೆ ಬೆಂಕಿ ಹಾಕಿದಿರಿ, ಆದರಿಂದಲೂ ಟ್ರಾಫಿಕ್‌ ಜಾಮ್‌ ಆಯ್ತು. ನೀವು ಹೀಗೆ ಮಾಡುವಂತಿಲ್ಲ. ಮೊದಲು ಕೆರೆಯತ್ತ ನೋಡಿ, ಸಮಸ್ಯೆ ಪರಿಹರಿಸಿ,” ಎಂದು ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತಕ್ಕೆ ಖಡಕ್ಕಾಗಿ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಸ್ವತಂತರ್‌ ಕುಮಾರ್‌ ಸೂಚಿಸಿದರು. 

ವಿಚಾರಣೆ ವೇಳೆ ವಕೀಲರೊಬ್ಬರು ಬೆಂಗಳೂರಿನ ವೈಟ್‌ಫೀಲ್ಡ್‌ನ ಬಳಿ ಇರುವ ವರ್ತೂರು ಕೆರೆಯಿಂದ ಅಗಾಧ ಪ್ರಮಾಣದ ನೊರೆ ಹೊರಬರುತ್ತಿರುವ ಬಗ್ಗೆ ನ್ಯಾಯಾಧಿಕರಣದ ಗಮನಕ್ಕೆ ತಂದರು. ಇತ್ತೀಚೆಗಷ್ಟೇ ಸುರಿದ ಮುಂಗಾರು ಪೂರ್ವ ಮಳೆ ವೇಳೆ ಈ ಪ್ರಮಾಣದ ನೊರೆ ಕಾಣಿಸಿಕೊಂಡಿತು ಎಂದರು. 

Advertisement

ಅಲ್ಲದೆ ಈ ನೊರೆ ರಸ್ತೆಗಳ ಮೇಲೆ ಬಿದ್ದಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಜತೆಗೆ, ಅಲ್ಲಿನ ನಿವಾಸಿಗಳಿಗೆ ವಾಸಿಸಲು ಸಾಧ್ಯವಾಗದ ರೀತಿಯಲ್ಲಿ ತೊಂದರೆ ಕೊಡುತ್ತಿದೆ ಎಂದು ವಕೀಲರು ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾಗಿ ವಾದ ಮಂಡಿಸಿದ ವಕೀಲರು, ಈ ವಿಚಾರದಲ್ಲಿ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕ್ರಮ ತೆಗೆದುಕೊಂಡ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಧಿಕರಣದ ಮುಂದೆ ಮಾಹಿತಿ ನೀಡುತ್ತೇನೆ ಎಂದು ಹೇಳಿದರು. 

ಆಟೋಮೊಬೈಲ್‌ ಮಾರಾಟಗಾರರಿಗೆ ಸಿಗದ ರಿಲೀಫ್: ಬೆಳ್ಳಂದೂರು ಕೆರೆ ಬಳಿ ಇರುವ ಆಟೋಮೊಬೈಲ್‌ ಮಾರಾಟಗಾರರಿಗೆ ಎನ್‌ಜಿಟಿಯಲ್ಲಿ ಮತ್ತೆ ನಿರಾಸೆಯಾಗಿದೆ. ಫೆಬ್ರವರಿಯಲ್ಲಿ ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದ ಬಳಿಕ ಎನ್‌ಜಿಟಿ 76 ಮಾಲಿನ್ಯಕಾರ ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಿತ್ತು.

ಇದರಲ್ಲಿ ಆಟೋಮೊಬೈಲ್‌ ಮಾರಾಟಗಾರರು, ವಿನಾಯಿತಿ ನೀಡುವಂತೆ ಹಸಿರು ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಈ ಬಗ್ಗೆ ವಿನಾಯ್ತಿ ನೀಡಲು ಒಪ್ಪದ ನ್ಯಾ.ಸ್ವತಂತರ್‌ ಕುಮಾರ್‌ ಅವರು, ಕರ್ನಾಟಕ ಸರ್ಕಾರ, ಬೆಂಗಳೂರು ಕೆರೆಗಳ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನೋಟಿಸ್‌ ನೀಡಿದ್ದು, ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ. 

“ನೀವು ಜನ ಉಸಿರಾಡಲು ಮತ್ತು ಜೀವಿಸಲು ಕಷ್ಟಕರವಾಗಿರುವ ಪರಿಸ್ಥಿತಿ ಸೃಷ್ಟಿಸಿದ್ದೀರಿ. ಮಾಲಿನ್ಯದಿಂದ ನಮ್ಮ ಕಡೆ ಜನ ಸಾಯುತ್ತಿದ್ದಾರೆ ಎಂದು ಸಾರ್ವಜನಿಕರೇ ಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ನೀವು ಹೇಗೆ ಮಾಲಿನ್ಯ ಉಂಟು ಮಾಡುತ್ತಿದ್ದೀರಿ? ನೀವು ಪರಿಸರಕ್ಕೆ ಮಾರಕವಾದ ತ್ಯಾಜ್ಯದ ಬಗ್ಗೆ ಯಾವುದೇ ದಾಖಲೆಗಳನ್ನೂ ಇಟ್ಟಿಲ್ಲ. ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ವಿಧಾನ ಅಥವಾ ಸಂಗ್ರಹಿಸಿದ ಬಗ್ಗೆ ಯಾವುದಾದರೂ ದಾಖಲೆಗಳಿದ್ದರೆ ತೋರಿಸಿ. ಆಗ ನಾವು ಏನೂ ಮಾಡಲು ಹೋಗುವುದಿಲ್ಲ,” ಎಂದು ಪೀಠ ಖಾರವಾಗಿಯೇ ಹೇಳಿತು. 

ಆಟೋಮೊಬೈಲ್‌ ಡೀಲರ್‌ಗಳ ಪರ ಹಾಜರಾಗಿದ್ದ ವಕೀಲರು, ಮುಚ್ಚಲು ಹೇಳಿರುವ ಕಾರ್ಖಾನೆಗಳು ಬೆಳ್ಳಂದೂರು ಕೆರೆಯಿಂದ 15 ಕಿ.ಮೀ. ದೂರದಲ್ಲಿವೆ. ಈ ಕಾರ್ಖಾನೆಗಳು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುತ್ತಿದ್ದು, ಬೆಳ್ಳಂದೂರು ಕೆರೆಗೆ ಯಾವುದೇ ತ್ಯಾಜ್ಯ ಬಿಡುತ್ತಿಲ್ಲ ಎಂದು ಹೇಳಿದರು.

ಅಲ್ಲದೆ ಮಾರುತಿ ಕಂಪೆನಿ ನಿಯಮಗಳ ಪಾಲನೆ ಮಾಡುತ್ತಿರುವ ಬಗ್ಗೆ ಆಡಿಟ್‌ ರಿಪೋರ್ಟ್‌ನಲ್ಲಿ ತೋರಿಸಿದೆ. ಯಾವುದೇ ಮಾರಾಟಗಾರರು ನಿಯಮ ಪಾಲಿಸದೇ ಇದ್ದರೆ, ತನ್ನಿಂತಾನೇ ಅವರ ಪರವಾನಗಿ ರದ್ದಾಗುತ್ತದೆ. ಹೀಗಾಗಿ ನಾವು ಕೆರೆಯ ಮಾಲಿನ್ಯಕ್ಕೆ ಕಾರಣರಲ್ಲ. ಅಲ್ಲದೆ, ಮಾಲಿನ್ಯಕ್ಕೆ ಕಾರಣವಾದ ಕಾರ್ಖಾನೆಗಳನ್ನು ಮುಚ್ಚಲೇಬೇಕು ಎಂದು ವಕೀಲರು ಹೇಳಿದರು. ಮುಂದಿನ ವಿಚಾರಣೆಯನ್ನು ಜೂ. 8ಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next