ಬೆಂಗಳೂರು: ಹಲವು ಅಧ್ಯಯನಗಳ ಪ್ರಕಾರ 2030ರ ವೇಳೆಗೆ ದೇಶದಲ್ಲಿ ಆಹಾರಧಾನ್ಯಗಳ ಅಭಾವ ಉಂಟಾಗಲಿದ್ದು, ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳ ಅಳವಡಿಕೆ ಆಗಬೇಕು ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪದ್ಮಶ್ರೀ ಪ್ರೊ.ಬಲದೇವ್ ಸಿಂಗ್ ದಿಲ್ಲಾನ್ ತಿಳಿಸಿದರು.
ನಗರದಲ್ಲಿ ಸೋಮವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಭೂಹಿಡುವಳಿ ಕಡಿಮೆ, ಜನಸಂಖ್ಯೆ ಹೆಚ್ಚಳದ ನಡುವೆಯೂ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಫಲವಾಗಿ ಆಹಾರಧಾನ್ಯಗಳನ್ನು ರಫ್ತು ಮಾಡುವಷ್ಟು ಪ್ರಗತಿ ಸಾಧಿಸಿದ್ದೇವೆ.
ಆದರೆ, ಇತ್ತೀಚಿನ ದಿನಗಳಲ್ಲಿ ನಡೆಸಿದ ಹಲವು ಅಧ್ಯಯನಗಳ ಪ್ರಕಾರ 2030ರ ವೇಳೆಗೆ ಆಹಾರಧಾನ್ಯ, ಎಣ್ಣೆಕಾಳು, ಬೇಳೆಕಾಳುಗಳ ಕೊರತೆ ಉಂಟಾಗಲಿದೆ. ಆದ್ದರಿಂದ ದೇಶದ ಆಹಾರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ರೈತರ ಜೀವನಮಟ್ಟ ಸುಧಾರಿಸುವಂತಹ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನ್ಯಾನೊ ತಂತ್ರಜ್ಞಾನವು ಒಂದು ಆಶಾದಾಯಕ ತಂತ್ರಜ್ಞಾನದಂತೆ ಕಂಡುಬರುತ್ತಿದೆ. ಗಿಡಗಳ ಸಾಮರ್ಥ್ಯ, ಪೋಷಕಾಂಶ, ತ್ವರಿತಗತಿಯಲ್ಲಿ ರೋಗಗಳ ಪತ್ತೆ, ರೋಗಗಳಿಗೆ ಆಣಿಕ ಚಿಕಿತ್ಸೆ , ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿದೆ ಎಂದು ಪ್ರೊ.ಬಲದೇವ್ ಸಿಂಗ್ ತಿಳಿಸಿದರು.
ಇದೇ ವೇಳೆ ವಿವಿಧ ಪದವಿಗಳ ವಿದ್ಯಾರ್ಥಿಗಳಿಗೆ 119 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಈ ಪೈಕಿ 39 ವಿಶ್ವವಿದ್ಯಾಲಯದ ಚಿನ್ನದ ಪದಕಗಳು, ಮೂರು ಸ್ನಾತಕ ಮತ್ತು 4 ಸ್ನಾತಕೋತ್ತರ ಆವರಣ ಚಿನ್ನದ ಪದಕಗಳು ಹಾಗೂ 73 ದಾನಿಗಳ ಚಿನ್ನದ ಪದಕಗಳು,
21 ಚಿನ್ನದ ಪದಕಗಳ ಪ್ರಮಾಣಪತ್ರಗಳು ಇವೆ. 661 ಸ್ನಾತಕ ಪದವಿ, 309 ಸ್ನಾತಕೋತ್ತರ ಪದವಿ ಹಾಗೂ 72 ಡಾಕ್ಟೊರಲ್ ಪದವಿ ನೀಡಲಾಯಿತು. ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ರಾಜ್ಯಪಾಲ ಹಾಗೂ ಕುಲಾಧಿಪತಿ ವಜುಭಾಯಿ ವಾಲಾ ಗೈರುಹಾಜರಿದ್ದರು.