ವಿಜಯಪುರ : ಹಪ್ಪಳ ಉತ್ಪಾದನಾ ಘಟಕದ ಪರವಾನಿಗೆ ನವೀಕರಣಕ್ಕೆ ಉದ್ಯಮಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಆಹಾರ ಸುರಕ್ಷತೆ-ಗುಣಮಟ್ಟ ಪ್ರಾಧಿಕಾರ ಕಛೇರಿ ಡಾಟಾ ಆಪರೇಟರ್ ಲಂಚಕ್ಕೆ ಬೇಡಿಕೆ ಇಟ್ಟು, ಗುರುವಾರ ಲಂಚ ಸ್ವೀಕರಿಸುವಾಗ ಹಣದ ಸಮೇತ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
2 ಸಾವಿರ ರೂ. ಲಂಚಕ್ಕ ಬೇಟಿಕೆ ಇಟ್ಟು, ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿರುವ ಆಹಾರ ಸುರಕ್ಷತೆ-ಗುಣಮಟ್ಟ ಪ್ರಾಧಿಕಾರ ಕಚೇರಿ ಡಾಟಾ ಆಪರೇಟರ್ ಕಿರಣ ಡಾಂಗೆ ಎಂದು ಗುರುತಿಸಲಾಗಿದೆ.
ನಗರದ ಲಾಲ್ ಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ ಪ್ರದೇಶದಲ್ಲಿ ವೇದಾಂತ ಹೆಸರಿನ ಹಪ್ಪಳ ಉದ್ಯಮ ನಡೆಸುತ್ತಿರುವ ಪ್ರವೀಣ ಸುಗಂಧಿ ಎಂಬವರು ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರು. ಅನುಮತಿ ಅವಧಿ ಮೀರಿ, ನವೀಕರಣಕ್ಕೆ ಪ್ರವೀಣ ಅರ್ಜಿ ಸಲ್ಲಿಸಿದಾಗ ಕಿರಣ ಲಂಚಕ್ಕೆ ಬೇಡಿಕೆ ಇರಿಸಿ, ಸೆರೆಯಾಗಿದ್ದಾನೆ.
ಇದೇ ವೇಳೆ ಸ್ಥಳದಲ್ಲಿದ್ದ ಶಿವಾಜಿ ಪವಾರ್ ಎಂಬ ವ್ಯಕ್ತಿಯನ್ನು ವಿಚಾರಿಸಿದ್ದು, ತಾನು ಸದರಿ ಕಚೇರಿಯಲ್ಲಿ ನಿಗದಿಗಿಂತ ಹೆಚ್ಚಿನ ಹಣ ನೀಡಿ ಲೈಸೆನ್ಸ್ ನವೀಕರಿಸುವ ಏಜೆಂಟ್ ಎಂದು ಹೇಳಿಕೊಂಡಿದ್ದು, ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಡಿಎಸ್ಪಿ ಎಂ.ಕೆ.ಗಂಗಲ್ ನೇತೃತ್ವದಲ್ಲಿ ಸಿಪಿಐಗಳಾದ ಪರಮೇಶ್ವರ ಕವಟಗಿ, ಚಂದ್ರಕಲಾ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಲಂಚದ ಹಣದ ಸಮೇತ ಬಂಧಿಸಿದ್ದಾರೆ.