Advertisement

ಜಾನಪದ ಸಿರಿವಂತ ಸಂಸ್ಕೃತಿ: ಬಾಲಾಜಿ

03:32 PM Aug 22, 2017 | |

ಇಂಚಗೇರಿ: ಜಾನಪದ ಸಂಸ್ಕೃತಿ ಸಿರಿವಂತ ಸಂಸ್ಕೃತಿಯಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಠದಿಂದ ಮಠಕ್ಕೆ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯ ಕಾರ್ಯದರ್ಶಿ ಅಧ್ಯಕ್ಷ ಡಾ| ಎಸ್‌.ಬಾಲಾಜಿ ಹೇಳಿದರು. ಕರಿಬಸವೇಶ್ವರ ಶಿವಾಚಾರ್ಯರ ಹಿರೇಮಠದಲ್ಲಿ ಏರ್ಪಡಿಸಿದ್ದ ಮಠದಿಂದ ಮಠಕ್ಕೆ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿ ಅಳಿಯದಂತೆ ಕಾಪಾಡುವ ಅವಶ್ಯಕತೆ ಎಂದರು. ಜಾನಪದ ಮೂಲೆ ಗುಂಪಾದರೆ ಮಾನವ ಜನಾಂಗ ಅಳಿದಂತೆ. ಕಲೆಗಳಲ್ಲಿ ಅನೇಕ ಪ್ರಕಾರಗಳಿದ್ದರೂ ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆ ಇನ್ನೂ ಜೀವಂತವಾಗಿದೆ. ಗ್ರಾಮೀಣ ಭಾಗದಲ್ಲಿ ಮಠಗಳು ಜಾನಪದ ಕಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಡಾ| ರೇಣುಕಾ ಶಿವಾಚಾರ್ಯರು ಮಾತನಾಡಿ, ಜಾನಪದ ಕಲೆ ಕಾಪಾಡುವ ಮೂಲಕ ಭಾರತದ ಸನಾತನ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಯುವ ಪೀಳಿಗೆಗೆ ಪರಿಚಯಿಸುವುದು ಪರಿಷತ್‌ ಕೆಲಸವಾಗಿದೆ ಎಂದರು. ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿ ಕನ್ನಡ ಜಾನಪದ ಪರಿಷತ್‌ ಘಟಕ ಪ್ರಾರಂಭಿಸಲಾಗುವದು. ಅದಕ್ಕೆ ಶ್ರೀಮಠದ ಸಹಾಯ ಸಹಕಾರ ಸದಾಕಾಲ ಇರುತ್ತದೆ ಎಂದ ಅವರು, ಗಡಿನಾಡಿನಲ್ಲಿ ಜಾನಪದ ಉತ್ಸವ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಜನಪದ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಮಠಗಳು ಜಾನಪದ ಕತೆಯ ಪರಿಕಲ್ಪನೆಯಾಗಿವೆ. ಕಾಲ ಬದಲಾದರೂ ಮಠಗಳಲ್ಲಿ ಜರುಗುವ ಜಾನಪದ ಆಚರಣೆ, ಸಂಪ್ರದಾಯ ಬದಲಾಗಿಲ್ಲ. ಕಾರಣ ಮಠಗಳು ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವುದೇ ಮಠದಿಂದ ಮಠಕ್ಕೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ರಾಜಶೇಖರ ಸ್ವಾಮೀಜಿ, ಕನ್ನೂರ ಶ್ರೀಗಳು ಆಶೀರ್ವಚನ ನೀಡಿದರು. ಜಾನಪದ ವಲಯ ಅಧ್ಯಕ್ಷ ಯಲಗೊಂಡ ಪೂಜಾರಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂಗಮೇಶ್ವರ ಮಹಾರಾಜರು ಕನ್ನೂರ, ಬಸವಣ್ಣಪ್ಪ ಅಕ್ಕಿಮಠ, ರಮೇಶ ತೇಲಿ, ಎಸ್‌.ಎಲ್‌. ಮೇತ್ರಿ, ಶಿವಾನಗೌಡ ಪಾಟೀಲ, ಗುರುಪಾದಪ್ಪ ಗಡಶೆಟ್ಟಿ, ಸದಾಶಿವ ಹೂಗಾರ, ಗ್ರಾಪಂ ಅಧ್ಯಕ್ಷೆ ಭಾರತಿ ಚವ್ಹಾಣ, ರಾಜು ಏಳಗಿ, ರವಿ ದೇವರ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ರಮೇಶ ದೀಕ್ಷಿತ ಸ್ವಾಗತಿಸಿದರು. ಮಂಜು ಪರ್ವತಿ ನಿರೂಪಿಸಿದರು. ಕಾಳಪ್ಪ ಬಡಿಗೇರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next