ಚಿಕ್ಕಬಳ್ಳಾಪುರ: ಜಾಗತೀಕರಣದ ಪರಿಣಾಮ ಟಿವಿ, ಮೊಬೈಲ್ ವ್ಯಾಮೋಹಕ್ಕೊಳಗಾಗಿ ವಿದ್ಯಾರ್ಥಿ, ಯುವ ಸಮೂಹ ಇಂಟರ್‌ನೆಟ್, ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಆಪ್‌ಗ್ಳಲ್ಲಿ ಸಕ್ರಿಯರಾಗಿದ್ದು, ನಮ್ಮ ಮೂಲ ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಜನಪದ ಕಲಾವಿದ ನಾರಮಾಕಲಹಳ್ಳಿ ಮುನಿರೆಡ್ಡಿ ಕಳವಳ ವ್ಯಕ್ತಪಡಿಸಿದರು.
ನಗರದ ವಿಶ್ವ ವಿವೇಕ ಪದವಿ ಕಾಲೇಜಿನಲ್ಲಿ ಭಾನುಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಮೂಲ ಸಂಸ್ಕೃತಿಯ ಕಲೆಗಳಾದ ಯಕ್ಷಗಾನ, ವೀರಗಾಸೆ, ಡೊಳ್ಳುಕುಣಿತ, ಪಂಡರಿಭಜನೆ, ಬಯಲುನಾಟಕ ಮುಂತಾದ ಕಲೆಗಳು ಹಳ್ಳಿಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಇತ್ತೀಚಿಗೆ ಜಾಗತೀಕರಣದ ಸೆಳೆತಕ್ಕೆ ಸಿಲುಕಿ ಎಲ್ಲವೂ ಮಾಯವಾಗುತ್ತಿವೆ ಎಂದರು.
ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ: ಮುಂದಿನ ಪೀಳಿಗೆಗೆ ದೇಶಿಯ ಸಂಸ್ಕೃತಿ, ಕಲೆ, ಸಂಪ್ರದಾಯಗಳನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಸಂಘ ಸಂಸ್ಥೆಗಳು, ಜಾನಪದ ಕಲಾವಿದರು ಇವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಒದಗಿಬಂದಿದೆ. ಅವುಗಳ ಬಗ್ಗೆ ಇಂದಿನ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಈ ಕಲೆಗಳ ಮೂಲಕ ನಮ್ಮಲ್ಲಿ ಮಾನವೀಯ ಮೌಲ್ಯಗಳು ಬೆಳೆಸಲು ಸಹಾಯಕವಾಗಿದೆ ಎಂದು ತಿಳಿಸಿದರು.
ವಿದೇಶಿ ಸಂಸ್ಕೃತಿಗೆ ಆಕರ್ಷಿತ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಚುಸಾಪ ಅಧ್ಯಕ್ಷ ಪಾತಮುತ್ತಕಹಳ್ಳಿ ಎಂ.ಚಲಪತಿಗೌಡ, ಇತ್ತೀಚೆಗೆ ಯುವಜನತೆ ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ಪರಂಪರೆಗಳನ್ನು ಮರೆತು ವಿದೇಶಿ ಸಂಸ್ಕೃತಿಯ ಕಡೆ ಆಕರ್ಷಿತರಾಗುತ್ತಿರುವುದು ಭಯವನ್ನುಂಟು ಮಾಡಿದೆ. ಈಗಾಗಲೇ ಅನೇಕ ವೃದ್ಧಾಶ್ರಮ ಸ್ಥಾಪನೆಯಾಗಿದ್ದು, ಇದೇ ರೀತಿ ಮುಂದುವರಿದರೆ ಸಮಾಜ ಆತಂಕದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.
ಕಲಾ ಸೇವೆಗೆ ಸಿಕ್ಕ ಗೌರವ: ನಮ್ಮ ಸಾಹಿತ್ಯ, ಸಂಸ್ಕೃತಿಯ ಪರಂಪರೆ ಇಂದಿನ ಯುವಸಮೂಹಕ್ಕೆ ತಲುಪಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸುಮಾರು 2 ದಶಕಗಳಿಂದ ಜಾನಪದ ಕಲೆ, ಸಂಸ್ಕೃತಿಯನ್ನು ಪಸರಿಸುತ್ತಿರುವ ಮುನಿರೆಡ್ಡಿರವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಅವರ ಕಲಾ ಸೇವೆಗೆ ಸಿಕ್ಕ ಗೌರವ ಎಂದು ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ರೆಡ್ಡಿ, ನಿರ್ದೇಶಕ ಸದಾಶಿವ, ಚುಸಾಪ ಪದಾಧಿಕಾರಿಗಳಾದ ಅಶ್ವತ್ಥ ನಾರಾಯಣ, ರಮಣ್‌ಅಕೇಶ್, ಸಾಹಿತಿಗಳಾದ ಸರಸಮ್ಮ, ಲತಾ ರಾಮಮೋಹನ್ ಉಪಸ್ಥಿತರಿದ್ದರು.
ಜನಪದ ಕಲೆಗಳು ಗ್ರಾಮೀಣ ಭಾಗದ ಜನರಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯದ ಜೀವನಕ್ಕೆ ಬುನಾದಿ ಕಲ್ಪಿಸಿವೆ. ಉಳಿಸಿ ಬೆಳೆಸುವ ಕೆಲಸ ನಾಗರಿಕ ಸಮಾಜ ಮಾಡಬೇಕು. ಸತತ ಮೂವತ್ತು ಜನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಅಕಾಡೆಮಿ ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.
-ಜಿ.ಮುನಿರೆಡ್ಡಿ, ಹಿರಿಯ ಜನಪದ ಕಲಾವಿದರು