ಹುಬ್ಬಳ್ಳಿ: ನಮ್ಮ ನಾಡಿಗೆ ಶ್ರೇಷ್ಠತೆ ತಂದುಕೊಟ್ಟದ್ದೆ ಜಾನಪದ ಸಂಸ್ಕೃತಿ ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು. ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಲಿಂ| ಹಾನಗಲ್ಲ ಕುಮಾರ ಸ್ವಾಮಿಗಳ 150ನೇ ಜಯಂತಿ ಮಹೋತ್ಸವ ಸ್ಮರಣೆ ಅಂಗವಾಗಿ ಧಾರವಾಡದ ಜಾನಪದ ಸಂಶೋಧನ ಕೇಂದ್ರ ಹಾಗೂ ಸ್ಥಳೀಯ ರಾಣಿಚೆನ್ನಮ್ಮ ಮಹಿಳಾ ಮಂಡಳ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಜಾನಪದ ಹಾಡುಗಾರಿಕೆ ತರಬೇತಿ ಶಿಬಿರದ ಸಮಾರೋಪದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದೇಶದ ಸಂಸ್ಕೃತಿ, ಸಂಸ್ಕಾರ ಉಳಿದಿರುವುದೋ ಮಹಿಳೆಯರಿಂದ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಜಾನಪದ ಹಾಸುಹೊಕ್ಕಾಗಿದೆ. ನಾವು ಬೆಳಿಗ್ಗೆ ಎದ್ದಕೂಡಲೇ ಅನ್ನ ಕೊಡುವ ಭೂತಾಯಿಗೆ ನಮಸ್ಕರಿಸಿ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಜನಪದರು ಹೇಳುತ್ತಾರೆ. ಆದರೆ ಇಂದು ನಾವೆಲ್ಲ ಬೆಳಿಗ್ಗೆ ಏಳುತ್ತಲೇ ಟಿವಿ ನೋಡುತ್ತೇವೆ.
ನಮ್ಮ ಬದುಕು ಎತ್ತ ಸಾಗುತ್ತಿದ್ದೇವೋ ಗೊತ್ತಾಗುತ್ತಿಲ್ಲ. ಸಾಹಿತ್ಯವೂ ಅಧೋಗತಿಗೆ ಸಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿ, ಜಗತ್ತಿಗೆ ಸಂಸ್ಕೃತಿ ಕಲಿಸಿದ ದೇಶ ಭಾರತ. ಹೀಗಾಗಿ ವಿಶ್ವದಲ್ಲಿ ಭಾರತೀಯರಿಗೆ ಗೌರವ, ಮಾನ್ಯತೆ ನೀಡಲಾಗುತ್ತಿದೆ.
ಜಾನಪದ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಇದೆ. ಮಹಿಳೆಯರಲ್ಲಿ ಜೀವನ, ಲವಲವಿಕೆ, ಚೈತನ್ಯ ಅಡಗಿದೆ. ಜಾನಪದ ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಹಿರಿಯರ ಜವಾಬ್ದಾರಿ ಗುರುತರವಾಗಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಈ ಮೊದಲು ಜೋಗುಳ ಪದ, ಸೋಬಾನ ಪದ, ಪಾರಿಜಾತ ಕೇಳಿದಾಗ ಮಾನವೀಯ ಸಂಬಂಧಗಳು ಬೆಳೆಯುತ್ತಿದ್ದವು.
ಆದರೆ ಇಂದಿನ ಮಕ್ಕಳಿಗೆ ಸಂಸ್ಕೃತಿ, ಪರಂಪರೆ, ಮಾನವೀಯ ಸಂಬಂಧಗಳೇ ಗೊತ್ತಿಲ್ಲ. ನಾವೆಲ್ಲ ಮನುಷ್ಯರಾಗಬೇಕಾದರೆ ಜಾನಪದ ಸಂಸ್ಕೃತಿ ಅವಶ್ಯ ಎಂದರು. ಕಸಾಪ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ, ರಾಣಿಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ತಾರಾದೇವಿ ವಾಲಿ ಮಾತನಾಡಿದರು.
ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಹಿರೇಮಠ, ಸಂದ್ಯಾ ದೀಕ್ಷಿತ, ಜಯಲಕ್ಷ್ಮೀ ಉಮಚಗಿ, ಪದ್ಮಜಾ ಉಮರ್ಜಿ, ಮಂಗಲಾ ನಾಡಕರ್ಣಿ, ಸುನಂದಾ ನಿಂಬನಗೌಡರ, ಜಯಶ್ರೀ ಗೌಳಿಯವರ, ಮೀನಾಕ್ಷಿ ಗೌಡರ, ರಾಜಶ್ರೀ ಗಿರಿಸಾಗರ ಇದ್ದರು. ವಿಶ್ವೇಶ್ವರಿ ಬಸವಲಿಂಗಯ್ಯ ಸ್ವಾಗತಿಸಿದರು.
ಇದಕ್ಕೂ ಮುನ್ನ ಜಾನಪದ ಹಾಡುಗಾರಿಕೆ ತರಬೇತಿ ಪಡೆದ ಮಹಿಳೆಯರು ಸೋಬಾನೆ ಪದ, ಪರಿಸರ ಗೀತೆ, ಲಾವಣಿ, ಜೋಗುಳ, ಚೌಡಕಿ ಪದ, ಬೀಸೂಕಲ್ಲು ಪದಗಳನ್ನು ಹಾಡಿದರು. ಮೂರುಸಾವಿರ ಮಠದ ಆವರಣದ ತುಂಬೆಲ್ಲ ಜಾನಪದ ಸಂಸ್ಕೃತಿಯ ಕಂಪು ಸೂಸುತ್ತಿತ್ತು. ಗ್ರಾಮೀಣ ಪ್ರದೇಶದ ಸೊಗಡು ರಾರಾಜಿಸುತ್ತಿತ್ತು.