ಹುಣಸೂರು: ಜನಪದ ಸಂಸ್ಕೃತಿ ವಿಶಿಷ್ಠವಾಗಿದ್ದು ಅದನ್ನು ಪೋಷಿಸುವ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಸೂಚನೆ ನೀಡಿದರು. ನಗರದ ರೋಟರಿ ಸಭಾಂಗಣದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಹಾಗೂ ರೋಟರಿ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಜನಪದ ಉಳಿದಿದ್ದರೆ ಅದು ಅನಕ್ಷರಸ್ಥರಿಂದ. ಅವರ ಪ್ರತಿ ಚಟುವಟಿಕೆಯಲ್ಲೂ ಜಾನಪದ ಸಂಸ್ಕೃತಿ ಅಡಕವಾಗಿದೆ. ಜಾನಪದದ ಹಾಡುಗಳು ನಮ್ಮ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನಪದಕ್ಕೆ ಆತಂಕ ಉಂಟಾಗಿದ್ದರೂ ಅಲ್ಲಲ್ಲಿ ಜಾನಪದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಉಳಿಸುವ ಕಾರ್ಯವಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿಲ್ಲ.
ಹೀಗಾಗಿ ನಿರಂತರವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸುತ್ತಿರಬೇಕು. ಶಾಲಾ-ಕಾಲೇಜು ಹಂತದಲ್ಲೇ ಜಾನಪದ ಹಾಡುಗಳನ್ನು ಹಾಡಿಸಬೇಕು ಎಂದರು. ಹುಣಸೂರು ಐತಿಹಾಸಿಕವಾಗಿ, ಪೌರಾಣಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಆದ ಹಿರಿಮೆ ತೋರಿದೆ. ನಾಡಿನಲ್ಲಿ ಸಾಹಿತಿ ಚದುರಂಗ, ಕೆಂಪರಾಜೇಅರಸ್, ಹುಣಸೂರು ಕೃಷ್ಣಮೂರ್ತಿಯಂತಹ ಸಿನಿಮಾ ದಿಗ್ಗಜರು, ದೇವರಾಜ ಅರಸರಂತಹ ಪರಿವರ್ತನೆ ನಾಯಕತ್ವ ನೀಡಿದ ತಾಲೂಕೆಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್, ಇತ್ತೀಚೆಗೆ ಕ್ರಿಕೆಟ್ ಮತ್ತು ಕಬಡ್ಡಿ ಆಟಗಳು ಬೆಟ್ಟಿಂಗ್‌ನಿಂದಾಗಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ ಜಾನಪದವನ್ನು ನಮ್ಮ ಸಂಸ್ಕೃತಿಯ ಮೂಲಾಧಾರದಲ್ಲೇ ಉಳಿಸುವ ಕಲೆಯನ್ನಾಗಿಸಬೇಕು. ಮುಂದೆ ರಾಜ್ಯಮಟ್ಟದ ಜಾನಪದ ಸ್ಪರ್ಧೆಗಳನ್ನು ಆಯೋಜಿಸಿದ್ದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಅನಂತರಾಜೇ ಅರಸ್ ಉದ್ಘಾಟಿಸಿದರು.
ಕನ್ನಡ ಜಾನಪದ ಪರಿಷತ್ ಕೇಂದ್ರ ಸಮಿತಿ ಖಜಾಂಚಿ ಡಾ.ಕನಕತಾರಾ, ಡಾ.ಪ್ರಮೀಳಾದೇವಿ, ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ತಾಲೂಕು ಅಧ್ಯಕ್ಷ ಪುಟ್ಟಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ್, ಕೆ.ಆರ್.ನಗರ ತಾಲೂಕು ಅಧ್ಯಕ್ಷ ಸಂಪತ್, ಪರಿಷತ್‌ನ ಆನಂದ್, ಟಿ.ಲೋಕೇಶ್, ಗಣಪತಿ, ಸ್ವಪ್ನ ಚಂದ್ರಶೇಖರ್, ಸಣ್ಣಮ್ಮ, ರಮೇಶ್, ಯೋಗೇಂದ್ರ, ಉಮಾಪತಿ, ನಾಗಣ್ಣ ಮತ್ತಿತರರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ 72 ಮಂದಿ ಸ್ಪರ್ಧಾಳುಗಳು ತಮ್ಮ ಕಂಠಸಿರಿ ಮೂಲಕ ಜಾನಪದ ಗೀತೆ ಹಾಡಿದರು.
ಸಾಧಕರಿಗೆ ಸನ್ಮಾನ: ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿಂತಕರಾದ ಪ್ರೊ.ಎಚ್.ಆರ್.ಸಿದ್ದೇಗೌಡ, ವಿಶ್ರಾಂತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯ, ಗಾಯಕರಾದ ಸಿ.ಎಸ್.ಮಹೇಶ್, ವಸಂತಹೊನ್ನೇನಹಳ್ಳಿ, ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಡೀಡ್ ಡಾ.ಶ್ರೀಕಾಂತ್‌ರನ್ನು ಸನ್ಮಾನಿಸಲಾಯಿತು.
ಜನಪದ ಗೀತೆಗಳನ್ನು ಕೇಳುತ್ತಿದ್ದಂತೆ ಗ್ರಾಮೀಣ ಸೊಗಡು ಕಣ್ಮುಂದೆ ಬರಲಿದೆ. ಇತ್ತೀಚೆಗೆ ಮನುಷ್ಯ ತನ್ನ ಭಾವನೆಗಳನ್ನು ಕಳೆದುಕೊಳ್ಳುತ್ತಿರುವುದರಿಂದ ನಮ್ಮ ಸಂಸ್ಕೃತಿ, ಪರಂಪರೆಗೆ ಪೆಟ್ಟು ಬಿದ್ದಿದೆ.
-ಎಚ್.ಪಿ.ಮಂಜುನಾಥ್, ಶಾಸಕ