Advertisement

ಫ್ಲಿಪ್‍ಕಾರ್ಟ್‍ನಿಂದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ; ಕಾಗದದ ಉತ್ಪನ್ನಗಳ ಬಳಕೆ

08:38 AM May 19, 2020 | Nagendra Trasi |

ಬೆಂಗಳೂರು: ದೇಶೀಯ ಇಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ ತನ್ನ ಮಾರಾಟದ ಉತ್ಪನ್ನಗಳನ್ನು ಸುಸ್ಥಿರ ರೀತಿಯಲ್ಲಿ ಪ್ಯಾಕ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವುದು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

Advertisement

ಶೂನ್ಯ ತ್ಯಾಜ್ಯ ಉತ್ಪಾದನೆ ಪರಿಕಲ್ಪನೆಯತ್ತ ಗಮನಹರಿಸಿರುವ ಫ್ಲಿಪ್‍ಕಾರ್ಟ್ ತನ್ನ ಮಾರಾಟದ ಉತ್ಪನ್ನಗಳ ಪ್ಯಾಕೇಜಿಂಗ್ ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಇದರ ಪರಿಣಾಮ ತನ್ನದೇ ಆದ ಸಪ್ಲೈ ಚೇನ್‍ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸುಮಾರು ಶೇ.50 ರಷ್ಟು ಕಡಿಮೆ ಮಾಡಿದೆ. ಮಹಾರಾಷ್ಟ್ರದಲ್ಲಿ ತನ್ನದೇ ಸ್ವಂತ ಸಪ್ಲೈ ಚೇನ್‍ನಲ್ಲಿ ಮೇ 1, 2020 ರಿಂದ ಸಂಪೂರ್ಣವಾಗಿ ಕಾಗದದ ಪೊಟ್ಟಣಗಳಲ್ಲಿ ಪ್ಯಾಕ್ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಿದೆ.

ತನ್ನ ಸುಸ್ಥಿರ ಬೆಳವಣಿಗೆಗೆ ಕಂಪನಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುವತ್ತ ಗಮನಹರಿಸಿದೆ. ಇದರಲ್ಲಿ ಪ್ರಮುಖವಾಗಿ ಪರಿಸರ ಸ್ನೇಹಿ ಪೇಪರ್ ಶ್ರೆಡ್ಸ್ ಬಳಕೆ, ಪಾಲಿ ಪೌಚ್‍ಗಳ ಬದಲಿಗೆ ಪುನರ್‍ ಬಳಕೆ ಮಾಡಬಹುದಾದ ಪೇಪರ್ ಬ್ಯಾಗ್‍ಗಳ ಬಳಕೆ, ಬಬಲ್ ರ್ಯಾಪ್‍ಗಳು ಮತ್ತು ಏರ್ ಬ್ಯಾಗ್‍ಗಳ ಬದಲಾಗಿ ಕಾರ್ಟನ್ ವೇಸ್ಟ್ ಶ್ರೆಡೆಡ್ ಉತ್ಪನ್ನಗಳಂತಹ ಹಲವಾರು ಬಗೆಯ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಕೆ ಮಾಡಲು ಆರಂಭಿಸಿದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಸೆಕ್ಯೂರಿಟಿ ಬ್ಯಾಗ್ ಗಳಿಗೆ ಬದಲಾಗಿ ಕಾಗದದಿಂದ ತಯಾರಿಸಲಾದ ಸೆಕ್ಯೂರಿಟಿ ಎನ್ವಲಪ್‍ಗಳ ಬಳಕೆ ಮಾಡಲಾಗುತ್ತಿದೆ. ರಾಪಿಂಗ್ ಫಿಲ್ಮ್‍ಗಳ ಬದಲಾಗಿ ಪುನರ್‍ಬಳಕೆ ಮಾಡಿದ ಕಾಗದದಿಂದ ತಯಾರಿಸಲಾಗಿರುವ ಕುಶನಿಂಗ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ.

ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತು ಇತರೆ ಪರಿಸರ ಸ್ನೇಹಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದುಕೊಂಡು ಸುಸ್ಥಿರ ಪರಿಸರ ನಿರ್ಮಾಣದತ್ತ ಹೆಜ್ಜೆ ಇರಿಸಿದೆ. ಈ ಮೂಲಕ ತನ್ನ ಲಕ್ಷಾಂತರ ಮಾರಾಟಗಾರ ಪಾಲುದಾರರೂ ಸಹ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದೆ. ಪ್ಲಾಸ್ಟಿಕ್ ಇನ್ನಿತರೆ ಉತ್ಪನ್ನಗಳಿಂದ ತಯಾರಿಸಲಾದ ಪ್ಯಾಕೇಜಿಂಗ್ ಉತ್ಪನ್ನಗಳಿಗಿಂತ ಕಾಗದದಿಂದ ತಯಾರಿಸಲಾದ ಉತ್ಪನ್ನಗಳಿಗೆ ಕಡಿಮೆ ವೆಚ್ಚವಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದೆ.

Advertisement

ಫ್ಲಿಪ್‍ಕಾರ್ಟ್ ಪ್ರಸ್ತುತ 2,00,000 ಕ್ಕೂ ಅಧಿಕ ಸ್ಥಳೀಯ ಮಟ್ಟದ ಮಾರಾಟಗಾರರನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಹೆಚ್ಚಿನವರು ಎಸ್‍ಎಂಇಗಳಾಗಿವೆ.
ಇವರಲ್ಲಿ ಬಹುಪಾಲು ಮಾರಾಟಗಾರರು ಗ್ರಾಹಕರಿಂದ ನೇರವಾಗಿ ಆರ್ಡರ್‍ಗಳನ್ನು ಪಡೆಯುತ್ತಿದ್ದಾರೆ ಮತ್ತು ತಮ್ಮದೇ ಆದ ಪ್ಯಾಕೇಜಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಫ್ಲಿಪ್‍ಕಾರ್ಟ್ ಗ್ರೂಪ್‍ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಮಾತನಾಡಿ, “ಪರಿಸರ ಸುಸ್ಥಿರತೆ ವಾತಾವರಣವನ್ನು ನಿರ್ಮಾಣ ಮಾಡಲು ಫ್ಲಿಪ್‍ಕಾರ್ಟ್ ಬದ್ಧವಾಗಿದೆ ಮತ್ತು ದೀರ್ಘಾವಧಿಯ ಸುಸ್ಥಿರತೆ ಉಪಕ್ರಮಗಳನ್ನು ಕೈಗೊಳ್ಳುವತ್ತ ವಿವಿಧ ಪಾಲುದಾರರೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ಮೂಲಕ ಪರಿಸರಸ್ನೇಹಿ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ನಮ್ಮದೇ ಸಪ್ಲೈ ಚೇನ್‍ನಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಪರಿಚಯಿಸುತ್ತಿದ್ದೇವೆ. ಈ ನಮ್ಮ ಉಪಕ್ರಮವು ಈಗ ಮತ್ತು ಭವಿಷ್ಯದಲ್ಲಿ ಉತ್ತಮ ರೀತಿಯ ಪರಿಣಾಮ ಮತ್ತು ಫಲಿತಾಂಶವನ್ನು ನೀಡಲಿದೆ’’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next