Advertisement

ದಸರೆಗೆ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ

07:45 AM Jul 31, 2017 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿರುವಾಗಲೇ ಪ್ರವಾಸೋದ್ಯಮ
ಬೆಳವಣಿಗೆಗೆ ಪೂರಕವಾಗಿ ಮೈಸೂರಿನಿಂದ ವಿಮಾನಯಾನ ಸೇವೆ ಆರಂಭವಾಗುತ್ತಿದೆ.

Advertisement

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆಯ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ನಡೆಸಲು ಟ್ರೂ ಜೆಟ್‌ ಮತ್ತು ಏರ್‌ ಒಡಿಶಾ ವಿಮಾನಯಾನ ಸಂಸ್ಥೆಗಳು 2017ರ ಏಪ್ರಿಲ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜತೆಗೆ 3 ವರ್ಷಗಳ ವೈಮಾನಿಕ ಸೇವೆಗೆ ಒಪ್ಪಂದ ಮಾಡಿಕೊಂಡಿದ್ದು, ಇತ್ತೀಚೆಗೆ ಎರಡೂ ಸಂಸ್ಥೆಗಳ ಅಧಿಕಾರಿಗಳು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಪರಿಶೀಲಿಸಿ ಹೋಗಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ವಿಮಾನ ಹಾರಾಟ ಆರಂಭವಾಗುವ ಸಾಧ್ಯತೆಯಿದ್ದು, ದಿನಾಂಕ ನಿಗದಿಯಾಗಬೇಕಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಟ್ರೂ ಜೆಟ್‌ ವಿಮಾನಯಾನ ಕಂಪನಿಯ 72 ಆಸನ ಸಾಮರ್ಥ್ಯದ ವಿಮಾನ ಹಗಲು ವೇಳೆ ಮೈಸೂರು-ಚೆನ್ನೈ
ನಡುವೆ ನಿತ್ಯ ಸೇವೆ ಒದಗಿಸಲಿದ್ದು, ದಿನಾಂಕ ಮತ್ತು ಸಮಯ ನಿಗದಿಯಾಗಬೇಕಿದೆ. ಏರ್‌ಒಡಿಶಾ ಕಂಪನಿಯ
19 ಆಸನ ಸಾಮರ್ಥ್ಯದ ವಿಮಾನ ನಿತ್ಯ ರಾತ್ರಿ 8.45ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಿ 9ಗಂಟೆಗೆ ಇಲ್ಲಿಂದ ಚೆನ್ನೈನತ್ತ ಹೊರಡಲಿದೆ. ಉಡಾನ್‌ ಯೋಜನೆಯಡಿ ಅರ್ಧ ಗಂಟೆಯ ಪ್ರಯಾಣಕ್ಕೆ 1,700 ರೂ., ಅರ್ಧಗಂಟೆಯಿಂದ ಒಂದು ಗಂಟೆ ಅವಧಿಯ ಪ್ರಯಾಣಕ್ಕೆ 2,500 ರೂ. ಏರ್‌ ಟಿಕೆಟ್‌ ದರ ನಿಗದಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ಪ್ರಮುಖ ನಗರಗಳ ನಡುವೆಯೂ ಮೈಸೂರಿನಿಂದ ವಿಮಾನಯಾನ ಸೌಲಭ್ಯ ಒದಗಿಸುವ ಬಗ್ಗೆ ಮಾತುಕತೆ ನಡೆದಿದೆ. ಜತೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳಿಗೆ ಇಂಧನ ತುಂಬಿಸುವ ವ್ಯವಸ್ಥೆಯನ್ನೂ ಕಲ್ಪಿಸಿರುವುದರಿಂದ ಪ್ರಮುಖ ನಗರಗಳ ನಡುವೆ ವಿಮಾನಯಾನ ಸೇವೆ ಕಲ್ಪಿಸಲು

ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಮೈಸೂರು ನಗರದ ಹೊರವಲಯದಲ್ಲಿರುವ ಮಂಡಕಳ್ಳಿಯಲ್ಲಿ 2010ರಲ್ಲಿ ಮೈಸೂರು ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೂ ಕಳೆದ ಏಳು ವರ್ಷಗಳಲ್ಲಿ ಇಲ್ಲಿನ ಪ್ರಯಾಣಿಕರಿಗೆ ವೈಮಾನಿಕ  ಸೇವೆ ಸಿಕ್ಕಿದ್ದು, ಬೆರಳೆಣಿಕೆ ದಿನಗಳು ಮಾತ್ರ. ಉಳಿದಂತೆ ಈ ನಿಲ್ದಾಣ ಗಣ್ಯರು, ಅತಿಗಣ್ಯರ ವಿಮಾನ (ವಿಐಪಿ ಫ್ಲೈಟ್ಸ್‌) ಹಾಗೂ ಚಾರ್ಟರ್‌ ವಿಮಾನಗಳ ಹಾರಾಟಕ್ಕಷ್ಟೇ ಸೀಮಿತವಾಗಿತ್ತು.

2010ರಲ್ಲಿ ಈ ವಿಮಾನ ನಿಲ್ದಾಣವನ್ನು ಅಂದಿನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದರು. 2011ರಲ್ಲಿ ಜೆಟ್‌ ಏರ್‌
ಕ್ರಾಫ್ಟ್ ಮತ್ತು ಕಿಂಗ್‌ಷರ್‌ ಏರ್‌ಲೈನ್ಸ್‌ ಸಂಸ್ಥೆಗಳು ಮೈಸೂರಿನಿಂದ ಬೆಂಗಳೂರು ಹಾಗೂ ಮೈಸೂರು-ಚೆನ್ನೈ ನಡುವೆ ವೈಮಾನಿಕ ಸೇವೆ ಆರಂಭಿಸಿದವಾದರೂ ಕೆಲವೇ ತಿಂಗಳಲ್ಲಿ ಪ್ರಯಾಣಿಕರ ಕೊರತೆ ಕಾರಣಕ್ಕೆ ಸೇವೆ ಸ್ಥಗಿತಗೊಳಿಸಲಾಯಿತು. ರಾಜ್ಯಸರ್ಕಾರದ ಪ್ರಯತ್ನದಿಂದ 2013ರಲ್ಲಿ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ಸ್ಪೈಸ್‌ಜೆಟ್‌ ವಿಮಾನಯಾನ ಆರಂಭವಾಯಿತಾದರೂ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ 2014ರ ಜುಲೈನಲ್ಲಿ ಮತ್ತೆ ವಿಮಾನ ಹಾರಾಟ ಸ್ಥಗಿತಗೊಂಡಿತು.

Advertisement

ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2015ರಲ್ಲಿ ಏರ್‌ ಇಂಡಿಯಾ ಇಲ್ಲಿಂದ ಪ್ರಾದೇಶಿಕ
ಸೇವೆ ಆರಂಭಿಸಿತ್ತಾದರೂ ಪ್ರಯಾಣಿಕರ ಕೊರತೆ ಕಾರಣಕ್ಕೆ ಎರಡೇ ತಿಂಗಳಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿತು.ಕಳೆದ ವರ್ಷ ಕೂಡ ದಸರಾ ಸಂದರ್ಭದಲ್ಲಿ ವಿಮಾನ ಯಾನ ಸೇವೆ ಆರಂಭಿಸಲು ಸಾಕಷ್ಟು ಪ್ರಯತ್ನ ನಡೆಯಿತಾದರೂ
ಯಾವುದೇ ವಿಮಾನಯಾನ ಕಂಪನಿ ಮುಂದೆ ಬರಲಿಲ್ಲ.

ಮೈಸೂರಿನಿಂದ ಪ್ರಯಾಣಿಕರ ಕೊರತೆ ಇರಲಿಲ್ಲ. ಆದರೆ, ವಿಮಾನಯಾನ ಕಂಪನಿಗಳು ತಮ್ಮದೇ ಸಮಸ್ಯೆಗಳಿಂದ ಇಲ್ಲಿಂದ ವಿಮಾನ ಹಾರಾಟ ಸ್ಥಗಿತಗೊಳಿಸಿದವು. ಉಡಾನ್‌ ಯೋಜನೆಯಡಿ ಪ್ರಯಾಣಿಕರ ಕೊರತೆಯಾದಲ್ಲಿ ಕಂಪನಿಗಳಿಗೆ ಶೇ.80ರಷ್ಟು ಕೇಂದ್ರ ಸರ್ಕಾರ, ಶೇ.20ರಷ್ಟು ರಾಜ್ಯಸರ್ಕಾರ ನಷ್ಟ ಭರಿಸುವುದರಿಂದ ಈ ಬಾರಿ ವಿಮಾನಯಾನ ಸೇವೆ ಸ್ಥಗಿತಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ.
ಮನೋಜ್‌ ಕುಮಾರ್‌ ಸಿಂಗ್‌
ನಿರ್ದೇಶಕ, ಮೈಸೂರು ವಿಮಾನ ನಿಲ್ದಾಣ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next