Advertisement

ಫ್ಲೆಕ್ಸ್‌ ಪರಿಕರಗಳಲ್ಲಿ ಪ್ಲಾಸ್ಟಿಕ್‌ ಇಲ್ಲ!

12:34 PM Nov 25, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಫ್ಲೆಕ್ಸ್‌, ಬ್ಯಾನರ್‌ ಮತ್ತು ಹೋರ್ಡಿಂಗ್ಸ್‌ ಸೇರಿದಂತೆ ಜಾಹೀರಾತು ಫ‌ಲಕಗಳಿಗೆ ಬಳಸಲಾಗುವ ಪರಿಕರಗಳ ಪೈಕಿ ಮಾದರಿ ಪರೀಕ್ಷೆ ಮಾಡಲಾದ ಪರಿಕರಗಳು ಪ್ಲಾಸ್ಟಿಕ್‌ ಮುಕ್ತವಾಗಿವೆ ಎಂಬುದು “ಸೆಂಟ್ರಲ್‌ ಇನ್ಸ್‌ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ’ಯ (ಸಿಐಪಿಇಟಿ) ಚೈನ್ನೈ ಕೇಂದ್ರದ ಪ್ರಾಥಮಿಕ ಅಧ್ಯಯನ ವರದಿಯಲ್ಲಿ ಕಂಡು ಬಂದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್‌ಗೆ ತಿಳಿಸಿದೆ.

Advertisement

ನಗರದಲ್ಲಿನ ಅನಧಿಕೃತ, ಕಾನೂನು ಬಾಹಿರ ಫ್ಲೆಕ್ಸ್‌, ಬ್ಯಾನರ್‌ ಮತ್ತು ಹೋರ್ಡಿಂಗ್ಸ್‌ ತೆರವು, ರಸ್ತೆ ಗುಂಡಿಗಳ ಭರ್ತಿ ಹಾಗೂ ರಾಜಕಾಲುವೆ ನಿರ್ವಹಣೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ ಎಸ್‌.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಪ್ರಾಥಮಿಕ ಅಧ್ಯಯನದ ವರದಿಯ ಮಾಹಿತಿ ಸಲ್ಲಿಸಿದರು.

ಬಿಬಿಎಂಪಿ ಹಾಗೂ ನೇರವಾಗಿ ಜಾಹೀರಾತು ಕಂಪನಿಗಳಿಂದ ಸ್ವೀಕರಿಸಲಾದ ಪ್ರತ್ಯೇಕ 8 ಪರಿಕರಗಳ ಮಾದರಿಗಳನ್ನು 3 ದಿನದ ಸಂಶೋಧನಾ ವರದಿಯಲ್ಲಿ ಪರೀಕ್ಷೆ ಮಾಡಲಾಗಿದ್ದು, ಎಲ್ಲ 8 ಮಾದರಿಗಳು ಪ್ಲಾಸ್ಟಿಕ್‌ ಮುಕ್ತ (ಪಿವಿಸಿ) ಎಂದು ತಿಳಿದು ಬಂದಿದೆ. ಇದರಲ್ಲಿ ಕೆಲವು ಪರಿಕರಗಳ ಮಾದರಿಗಳು “ಸಿಂಥೆಟಿಕ್‌ ಫ್ಯಾಬ್ರಿಕ್‌’ ಹೊಂದಿದ್ದರೆ ಕೆಲವು “ಕಾಟನ್‌ ಫ್ಯಾಬ್ರಿಕ್‌’ ಹೊಂದಿವೆ.

ಈ ಮಾದರಿ ಪರಿಕರಗಳಲ್ಲಿ “ಜೈವಿಕ ವಿಘಟನೆ’ ಹಾಗೂ “ಮರುಬಳಕೆ’ ಅಂಶಗಳು ಇರುವ ಬಗಿಗೆನ ಅಧ್ಯಯನ ವರದಿ ನ.27ರಂದು ನಮ್ಮ ಕೈ ಸೇರಲಿದೆ ಬಳಿಕ ಅದನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಈ ಮಧ್ಯೆ ಪರಿಕರದ ಮಾದರಿಯೊಂದನ್ನು ವಿಚಾರಣೆ ವೇಳೆ ನ್ಯಾಯಾಲಯದಲ್ಲೇ ನ್ಯಾಯಮೂರ್ತಿಗಳು ಖುದ್ದು ಪರಿಶೀಲಿಸಿದರು. ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೊಟ್ಟಿರುವಂತೆ ನ್ಯಾಯಪೀಠಕ್ಕೂ ಪರಿಕರಗಳ ಒಂದೊಂದು ಮಾದರಿಗಳನ್ನು ಹಾಜರುಪಡಿಸಿ ಎಂದು ಸೂಚಿಸಿದರು.

Advertisement

ಅನಧಿಕೃತ ಹೋರ್ಡಿಂಗ್ಸ್‌ ತೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ 55 ಅನಧಿಕೃತ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗಿದೆ. ಉಳಿದಂತೆ ಕಾನೂನು ವ್ಯಾಜ್ಯಗಳಿರುವ ಸುಮಾರು 1,800 ಹೋರ್ಡಿಂಗ್‌ ಸ್ಟ್ರಕ್ಚರ್‌ಗಳು ಹಾಗೆಯೇ ಇವೆ ಎಂದು ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಆದೇಶಗಳಿದ್ದರೂ ಬಿಬಿಎಂಪಿ ಜಾಜೀರಾತು ಫ‌ಲಕಗಳನ್ನು ತೆರವುಗೊಳಿಸುತ್ತಿದೆ ಎಂದರು.

ಶೀಘ್ರವೇ ಜಾಹಿರಾತು ನೀತಿ: ಜಾಹಿರಾತು ನೀತಿ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರಡು ನೀತಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈವರೆಗೆ 1,200 ಆಕ್ಷೇಪಣೆಗಳು, ಸಲಹೆಗಳು ಬಂದಿದ್ದು ಅವುಗಳ ಪರಿಶೀಲನೆ ನಡೆಯುತ್ತಿದೆ. ಈ ಪೈಕಿ 800ಕ್ಕೂ ಹೆಚ್ಚು ಜನ ತಮ್ಮ ಅಹವಾಲುಗಳನ್ನು ವ್ಯಕ್ತಿಗತವಾಗಿ ಆಲಿಸುವಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ಡಿಸೆಂಬರ್‌ ಮೊದಲ ವಾರದಲ್ಲಿ “ಸಾರ್ವಜನಿಕ ಅಹವಾಲು ಆಲಿಕೆ’ ಏರ್ಪಡಿಸಲು ಆಲೋಚಿಸಿದೆ. ಬಳಿಕ ಅದನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಬಿಬಿಎಂಪಿಯಿಂದ ಪ್ರಸ್ತಾವನೆ ಬಂದ ನಂತರ ಅದನ್ನು ಪರಿಶೀಲಿಸಿ ಸರ್ಕಾರದಿಂದ ಅನುಮೋದನೆ ನೀಡಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ಭರವಸೆ ನೀಡಿದರು. 

ರಸ್ತೆ ಗುಂಡಿ ಭರ್ತಿ: ವಕೀಲರ ಅಸಮಧಾನ: ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿ ವಿಚಾರಣೆಗೆ ಬರುವ ಒಂದೆರೆಡು ದಿನ ಮೊದಲು ಬಿಬಿಎಂಪಿ ಚುರುಕಾಗಿ ಕೆಲಸ ಮಾಡುತ್ತದೆ ಎಂದರು. ಇದನ್ನು ಬಿಬಿಎಂಪಿ ಪರ ವಕೀಲರು ನಿರಾಕರಿಸಿದರು.

ಈ ವೇಳೆ ” ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ಸಭೆಯಲ್ಲಿ ರಸ್ತೆ ಗುಂಡಿ ಭರ್ತಿ ಕಾಮಗಾರಿ ಪರಿಶೀಲಿಸಲು ನೇಮಿಸಲಾಗಿದ್ದ ಕೋರ್ಟ್‌ ಕಮಿಷನ್‌ನ ಸದಸ್ಯ  ಮಿಲಿಟರಿ ಎಂಜಿನಿಯರಿಂಗ್‌  ಸರ್ವೀಸಸ್‌ (ಎಂಇಎಸ್‌) ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ದಿನೇಶ್‌ ಅಗರವಾಲ್ ಅವರೂ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡರೆ ಸೂಕ್ತ ಎಂಬ ಮೌಖೀಕ ಅಭಿಪ್ರಾಯವನ್ನು ಆದಿತ್ಯ ಸೋಂದಿ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸಭೆಗೆ ಹಾಜರಾಗುವಂತೆ ಅಗರವಾಲ್‌ ಅವರಿಗೆ ಕೇಳಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು. ಈ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಡಿ.1ಕ್ಕೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next