Advertisement

ವೇತನ ತಾರತಮ್ಯ ಸರಿಪಡಿಸಿ: ಪ್ರಮೋದ್‌

02:32 PM Oct 26, 2017 | |

ಪುತ್ತೂರು: ಸರಕಾರದ ಸೌಲಭ್ಯಗಳನ್ನು ಜಾರಿಗೆ ತರುವುದೇ ರಾಜ್ಯ ಸರಕಾರಿ ನೌಕರರು. ಅವರಿಗೆ ಸೂಕ್ತ ಬೆಂಬಲ ನೀಡಿದರೆ ಇನ್ನಷ್ಟು ಕೆಲಸ ಮಾಡಲು ಸಾಧ್ಯ. ರಾಜ್ಯದಲ್ಲಿನ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ವೇತನ ತಾರತಮ್ಯ ಸರಿಪಡಿಸುವ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಮೋದ್‌ ಹೇಳಿದರು.

Advertisement

ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆ ವತಿಯಿಂದ ವೇತನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಜನಸಾಮಾನ್ಯರಿಗಾಗಿ ಹಲವು ಭಾಗ್ಯಗಳನ್ನು ನೀಡಿದೆ. ಇದರಂತೆ ಸರಕಾರಿ ನೌಕರರ ಹಿತದೃಷ್ಟಿ ಕಡೆಗೂ ಗಮನ ಹರಿಸಬೇಕು ಎಂದರು.

ವೇತನ ಭಾಗ್ಯ ನೀಡಿ
1920ರಲ್ಲಿ ಸ್ಥಾಪನೆಯಾದ ಸಂಘ ಇದುವರೆಗೆ ಯಾವುದೇ ಹೋರಾಟದ ಹಾದಿಯನ್ನು ಹಿಡಿದಿಲ್ಲ. ಇದೀಗ ಮನವಿ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಮನವಿಗೆ ಸ್ಪಂದನೆ ಸಿಗದೇ ಇದ್ದರೆ, ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ. ಆದ್ದರಿಂದ ಇದಕ್ಕೆ ಅವಕಾಶ ನೀಡದೆ, ವೇತನ ಭಾಗ್ಯ ನೀಡುವಂತೆ ಆಗ್ರಹಿಸಿದರು.

6ನೇ ವೇತನ ಆಯೋಗವು ವೇತನ ಭತ್ತೆಗಳ ಪರಿಷ್ಕರಣೆ, ಆಡಳಿತ ಸುಧಾರಣೆ ಸೇರಿದಂತೆ ಹಲವು ವಿಷಯಗಳ ಪರಿಶೀಲನ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಕಾಲಾವಕಾಶ ಕೇಳಲಾಗಿತ್ತು. ಅದರಂತೆ ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿದೆ. ಇದೀಗ ರಾಜ್ಯ ಸರಕಾರಿ ನೌಕರರಿಗೆ ಮಧ್ಯಮತರ ಪರಿಹಾರ ಮಂಜೂರು ಮಾಡುವ ಅನಿವಾರ್ಯ ಎದುರಾಗಿದೆ ಎಂದರು.

ಶಿಫಾರಸು ಅನುಷ್ಠಾನಗೊಳಿಸಿ
ರಾಜ್ಯ ಸರಕಾರಿ ನೌಕರರ ವೇತನ ಹಾಗೂ ತುಟ್ಟಿಭತ್ತೆಯನ್ನು ಕೇಂದ್ರ ಸರಕಾರಿ ನೌಕರರ ಜತೆ ತುಲನೆ ಮಾಡಿ ನೋಡಿದಾಗ, ಕನಿಷ್ಠ ಶೇ. 51ರಷ್ಟು ಹಾಗೂ ಗರಿಷ್ಠ ಶೇ. 56ರಷ್ಟು ವ್ಯತ್ಯಾಸ ಇರುತ್ತದೆ. ಕೇರಳ ರಾಜ್ಯ ಸರಕಾರ ತನ್ನ ನೌಕರರಿಗೆ ಒಂದಲ್ಲೊಂದು ರೀತಿಯ ವಿಶೇಷ ಭತ್ತೆಗಳನ್ನು ನೀಡುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸರಕಾರಿಗಳು ಕೇಂದ್ರದ 7ನೇ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಆಯೋಗ ರಚಿಸಿದೆ. ಕರ್ನಾಟಕ ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ರ್ಯೋನ್ಮುಖವಾಗಬೇಕು ಎಂದರು.

Advertisement

ವಿಳಂಬ ನೀತಿ
ರಾಮಕೃಷ್ಣ ಮಲ್ಲಾರ ಮಾತನಾಡಿ, ವೇತನ ತಾರತಮ್ಯ ನಿವಾರಿಸಲು ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಎಲ್ಲರಿಗೂ ಒಂದೇ ರೀತಿಯ ವೇತನ ನೀಡುವ ಅಗತ್ಯವಿದೆ ಎಂದರು. 

ಸಂಘ ಗೌರವಾಧ್ಯಕ್ಷ ಅಬೂಬಕ್ಕರ್‌, ಖಜಾಂಚಿ ನಾಗೇಶ ಕೆ., ಕಾರ್ಯದರ್ಶಿ ರಾಮಚಂದ್ರ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಡೆಪ್ಯುಟಿ ತಹಶೀಲ್ದಾರ್‌ ಶ್ರೀಧರ್‌, ಎಂ.ಆರ್‌. ಪದ್ಮಾವತಿ ಉಪಸ್ಥಿತರಿದ್ದರು. ಸಂಘ ಅಧ್ಯಕ್ಷ ಮೌರೀಸ್‌ ಮಸ್ಕರೇನ್ಹಸ್‌ ಸ್ವಾಗತಿಸಿದರು.ಸರಕಾರಿ ನೌಕರರ ಕಟ್ಟಡ ಸಮಿತಿ ಸಂಚಾಲಕ ಮಾಮಚ್ಚನ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಹಶೀಲ್ದಾರ್‌ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಸ್ಪಂದಿಸದಿದ್ದರೆ ಹೋರಾಟ
ರಾಜ್ಯ ಪರಿಷತ್‌ ಸದಸ್ಯ ಕೆ. ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ 5.20 ಲಕ್ಷದಷ್ಟು ರಾಜ್ಯ ಸರಕಾರಿ ನೌಕರರಿದ್ದಾರೆ. ಎಲ್ಲ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಸಾಮಗ್ರಿ ಖರೀದ ವೇಳೆ ರಾಜ್ಯ ಸರಕಾರಿ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರು ಒಂದೇ ರೀತಿಯ ಬೆಲೆ ನೀಡಬೇಕು. ಆದರೆ ವೇತನ ನೀಡುವಾಗ ಮಾತ್ರ ತಾರತಮ್ಯ. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾದೀತು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next