Advertisement

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

10:26 PM Oct 24, 2021 | Team Udayavani |

ಶಾರ್ಜಾ: ಚರಿತ ಅಸಲಂಕ ಮತ್ತು ಭನುಕ ರಾಜಪಕ್ಷ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದಿಂದ ಸಿಂಹಳೀಯರ ಪಡೆ ಬಾಂಗ್ಲಾ ಹುಲಿಗಳ ಸದ್ದಡಗಿಸಿದೆ. ರವಿವಾರದ ದೊಡ್ಡ ಮೊತ್ತದ ಮೊದಲಮುಖಾಮುಖಿಯಲ್ಲಿ 5 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ ಅಮೋಘ ಆರಂಭ ಪಡೆದಿದೆ.

Advertisement

ಶಾರ್ಜಾ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 4 ವಿಕೆಟ್‌ ನಷ್ಟಕ್ಕೆ 171 ರನ್‌ ಪೇರಿಸಿದರೆ, ಶ್ರೀಲಂಕಾ 18.5 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್‌ ಬಾರಿಸಿತು.

ಅಸಲಂಕ 49 ಎಸೆತಗಳಿಂದ 80 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌, 5 ಫೋರ್‌ ಒಳಗೊಂಡಿತ್ತು. ರಾಜಪಕ್ಷೆ 31 ಎಸೆತಗಳಿಂದ 53 ರನ್‌ ಚಚ್ಚಿದರು. ಸಿಡಿಸಿದ್ದು 3 ಬೌಂಡರಿ ಹಾಗೂ 3 ಸಿಕ್ಸರ್‌. ಒಂದಕ್ಕೆ 71 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಲಂಕಾ 79ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿದಾಗ ಅಸಲಂಕ-ರಾಜಪಕ್ಷೆ ತಮ್ಮ ಅಸಲಿ ಬ್ಯಾಟಿಂಗ್‌ ಶೌರ್ಯ ತೋರಿದರು. ಈ ಜೋಡಿ 5ನೇ ವಿಕೆಟಿಗೆ 52 ಎಸೆತಗಳಿಂದ 86 ರನ್‌ ಸೂರೆಗೈದು ಲಂಕೆಯ ಪಾರಮ್ಯ ಸಾರಿದರು.

ನೈಮ್‌, ರಹೀಂ ಅರ್ಧ ಶತಕ
ಬಾಂಗ್ಲಾದೇಶದ ಸವಾಲಿನ ಮೊತ್ತಕ್ಕೆ ಕಾರಣರಾದವರು ಓಪನರ್‌ ಮೊಹಮ್ಮದ್‌ ನೈಮ್‌ ಮತ್ತು ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ನೈಮ್‌ 62 ರನ್‌ ಬಾರಿಸುವ ಮೂಲಕ ಈ ಕೂಟದ ಮೊದಲ ಫಿಫ್ಟಿಗೆ ಸಾಕ್ಷಿಯಾದರು. ಬಳಿಕ ರಹೀಂ ಅಜೇಯ 57 ರನ್‌ ಬಾರಿಸಿದರು.

ಇದನ್ನೂ ಓದಿ:ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

Advertisement

ನೈಮ್‌-ಲಿಟನ್‌ ದಾಸ್‌ ಪವರ್‌ ಪ್ಲೇ ಅವಧಿಯಲ್ಲಿ ಅಮೋಘ ಆಟವಾಡಿ 40 ರನ್‌ ಒಟ್ಟುಗೂಡಿಸಿದರು. 17ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ನೈಮ್‌ 52 ಎಸೆತಗಳಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು (6 ಬೌಂಡರಿ). ರಹೀಂ ಆಟ ಹೆಚ್ಚು ಆಕ್ರಮಣಕಾರಿಯಾಗಿತ್ತು. ಅವರ 57 ರನ್‌ 37 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 5 ಫೋರ್‌ ಮತ್ತು 2 ಸಿಕ್ಸರ್‌. ನೈಮ್‌-ರಹೀಂ 3ನೇ ವಿಕೆಟಿಗೆ 8.3 ಓವರ್‌ಗಳಿಂದ 73 ರನ್‌ ಪೇರಿಸಿ ಬಾಂಗ್ಲಾ ಇನ್ನಿಂಗ್ಸ್‌ ಬೆಳೆಸಿದರು. ರಹೀಂ ಸಾಹಸದಿಂದ ಅಂತಿಮ 5 ಓವರ್‌ಗಳಲ್ಲಿ 53 ರನ್‌ ಸಂಗ್ರಹಗೊಂಡಿತು. ಇವರಿಬ್ಬರನ್ನು ಹೊರತುಪಡಿಸಿದರೆ 16 ರನ್‌ ಮಾಡಿದ ದಾಸ್‌ ಅವರದೇ ಹೆಚ್ಚಿನ ಗಳಿಕೆ. ಔಟಾಗಿ ಹೋಗುವಾಗ ದಾಸ್‌ ಮತ್ತು ಬೌಲರ್‌ ಲಹಿರು ಕುಮಾರ ನಡುವೆ ಮಾತಿನ ಚಕಮಕಿ ನಡೆಯಿತು. ಅಂಪಾಯರ್‌ಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಶಕಿಬ್‌ ವಿಶ್ವಕಪ್‌ ದಾಖಲೆ
ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ತಮ್ಮ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಿತ್ತು ನೂತನ ದಾಖಲೆ ಸ್ಥಾಪಿಸಿದರು. ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಶಾಹಿದ್‌ ಅಫ್ರಿದಿ ಅವರ ದಾಖಲೆಯನ್ನು ಮುರಿದರು (39 ವಿಕೆಟ್‌). ಈ ಪಂದ್ಯಕ್ಕೂ ಮುನ್ನ ಅಫ್ರಿದಿ ಮತ್ತು ಶಕಿಬ್‌ 39 ವಿಕೆಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದರು. ಶಕಿಬ್‌ ವಿಕೆಟ್‌ 41ಕ್ಕೆ ಏರಿತು.ಲಸಿತ ಮಾಲಿಂಗ 38, ಸಯೀದ್‌ ಅಜ್ಮಲ್‌ 36 ವಿಕೆಟ್‌ ಉರುಳಿಸಿ ಅನಂತರದ ಸ್ಥಾನದಲ್ಲಿದ್ದಾರೆ.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ
ಮೊಹಮ್ಮದ್‌ ನೈಮ್‌ ಸಿ ಮತ್ತು ಬಿ ಫೆರ್ನಾಂಡೊ 62
ಲಿಟನ್‌ ದಾಸ್‌ ಸಿ ಶಣಕ ಬಿ ಕುಮಾರ 16
ಶಕಿಬ್‌ ಅಲ್‌ ಹಸನ್‌ ಬಿ ಕರುಣಾರತ್ನೆ 10
ಮುಶ್ಫಿಕರ್‌ ರಹೀಂ ಔಟಾಗದೆ 57
ಅಫಿಫ್ ಹೊಸೇನ್‌ ರನೌಟ್‌ 7
ಮಹಮದುಲ್ಲ ಔಟಾಗದೆ 10
ಇತರ 9
ಒಟ್ಟು (4 ವಿಕೆಟಿಗೆ) 171
ವಿಕೆಟ್‌ ಪತನ: 1-40, 2-56, 3-129, 4-150.
ಬೌಲಿಂಗ್‌:
ಚಮಿಕ ಕರುಣಾರತ್ನೆ 3-0-12-1
ಬಿನುಕ ಫೆರ್ನಾಂಡೊ 3-0-27-1
ದುಷ್ಮಂತ ಚಮೀರ 4-0-41-0
ಲಹಿರು ಕುಮಾರ 4-0-29-1
ಚರಿತ ಅಸಲಂಕ 1-0-14-0
ವನಿಂದು ಹಸರಂಗ 3-0-29-0
ದಸುನ್‌ ಶಣಕ 2-0-14-0
ಶ್ರೀಲಂಕಾ
ಕುಸಲ್‌ ಪೆರೆರ ಬಿ ಅಹ್ಮದ್‌ 1
ಪಾಥುಮ್‌ ನಿಸ್ಸಂಕ ಬಿ ಶಕಿಬ್‌ 24
ಚರಿತ ಅಸಲಂಕ ಔಟಾಗದೆ 80
ಆವಿಷ್ಕ ಫೆರ್ನಾಂಡೊ ಬಿ ಶಕಿಬ್‌ 0
ವನಿಂದು ಹಸರಂಗ ಸಿ ನೈಮ್‌ ಬಿ ಸೈಫ‌ುದ್ದೀನ್‌ 6
ಭನುಕ ರಾಜಪಕ್ಷ ಬಿ ಅಹ್ಮದ್‌ 53
ದಸುನ್‌ ಶಣಕ ಔಟಾಗದೆ 1
ಇತರ 7
ಒಟ್ಟು (18.5 ಓವರ್‌ಗಳಲ್ಲಿ 5 ವಿಕೆಟಿಗೆ) 172
ವಿಕೆಟ್‌ ಪತನ: 1-2, 2-71, 3-71, 4-79, 5-165.
ಬೌಲಿಂಗ್‌:
ನಾಸುಮ್‌ ಅಹ್ಮದ್‌ 2.5-0-29-2
ಮೆಹೆದಿ ಹಸನ್‌ 4-0-30-0
ಮೊಹಮ್ಮದ್‌ ಸೈಫ‌ುದ್ದೀನ್‌ 3-0-38-1
ಶಕಿಬ್‌ ಅಲ್‌ ಹಸನ್‌ 3-0-17-2
ಮುಸ್ತಫಿಜುರ್‌ ರೆಹಮಾನ್‌ 3-0-22-0
ಮಹಮದುಲ್ಲ 2-0-21-0
ಅಫಿಫ್ ಹೊಸೇನ್‌ 1-0-15-0
ಪಂದ್ಯಶ್ರೇಷ್ಠ: ಚರಿತ ಅಸಲಂಕ

Advertisement

Udayavani is now on Telegram. Click here to join our channel and stay updated with the latest news.

Next