ಮಲ್ಪೆ: ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳು, ಬೇಡಿಕೆಗಳನ್ನು ಈಡೇರಿಸುವಂತೆ ಮಲ್ಪೆ ಮೀನುಗಾರ ಸಂಘದ ನಿಯೋಗವು ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ಯಾಂತ್ರಿಕ ಬೋಟುಗಳಿಗೆ ನೀಡುವ ಡೀಸೆಲ್ ಪ್ರಮಾಣವನ್ನು 300 ಲೀ.ನಿಂದ 400 ಲೀ.ಗೆ ಹೆಚ್ಚಿಸಬೇಕು ಮತ್ತು ವಾರ್ಷಿಕ ಕೋಟವನ್ನು ಹೆಚ್ಚಿಸಬೇಕು. ದೇಶದ ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಿಗೆ ಏಕರೂಪದ ನಿಮಯವನ್ನು ಜಾರಿಗೊಳಿಸಬೇಕು, ಸಮುದ್ರದಲ್ಲಿ ದುಡಿಯುವ ಮೀನುಗಾರರ ಹಿತದೃಷ್ಟಿಯಿಂದ ಅಂತಾರಾಜ್ಯ ಸಮನ್ವಯ ಸಮಿತಿ ರಚಿಸಬೇಕು. ಮಲ್ಪೆ ಬಂದರಿನಲ್ಲಿ ತುಂಬಿರುವ ಹೂಳೆತ್ತಬೇಕು. ಮಲ್ಪೆ ಬಂದರಿನ 2ನೇ ಹರಾಜು ಪ್ರಾಂಗಣ ನಾದುರಸ್ತಿಯಲ್ಲಿದ್ದು ಶೀಘ್ರ ದುರಸ್ತಿಗೊಳಿಸಬೇಕು. ರಾಜ್ಯದ ಎಲ್ಲ ಬಂದರುಗಳ ಬೋಟುಗಳು ಮಲ್ಪೆ ಬಂದರನ್ನು ಆಶ್ರಯಿಸುವುದರಿಂದ ಬಂದರಿನ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಬೇಕು. ನಾಡದೋಣಿ ಮೀನುಗಾರರಿಗೆ ತಂಗಲು ತಂಗುದಾಣ ನಿರ್ಮಿಸಬೇಕು, ಈಗಿರುವ ಪಾರ್ಕಿಂಗ್ ಜಾಗದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಚಿವರಿಗೆ ಮನವಿ ಮಾಡಲಾಯಿತು.
ಪರಿಶೀಲನೆಗೆ ಸೂಚನೆ :
ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು ತತ್‌ಕ್ಷಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನದಲ್ಲಿ ಕರಾವಳಿಯ ಎಲ್ಲ ಬಂದರುಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರವನ್ನು ಒದಗಿಸುವುದಾಗಿ ತಿಳಿಸಿದರು.
ಇಲಾಖೆ ನಿರ್ದೇಶಕ ರಾಮಾಚಾರಿ, ಉಪ ನಿರ್ದೇಶಕ ತಿಪ್ಪೇಸ್ವಾಮಿ, ಇಲಾಖಾ ಅಧಿಕಾರಿಗಳು ಮತ್ತು ನಿಯೋಗದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಆಳಸಮುದ್ರ ಮೀನು ಗಾರರ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಯಾಂತ್ರಿಕ ಟ್ರಾಲ್‌ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಮೀನುಗಾರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಲ್ಪೆ ಮೀನುಗಾರರ ಸಂಘದ ಕೋಶಾಧಿಕಾರಿ ಕರುಣಾಕರ ಸಾಲ್ಯಾನ್ ಉಪಸ್ಥಿತರಿದ್ದರು.