Advertisement

ಚೆಂಗನ್ನೂರು : ಬದುಕಿದವರಿಗೆ ನಿಜಕ್ಕೂ ಪುನರ್‌ ಜನ್ಮ 

06:00 AM Aug 31, 2018 | Team Udayavani |

ಚೆಂಗನ್ನೂರು: ಆ ನದಿಯ ಎರಡು ಬದಿ. ಒಂದು ಬದಿಯಲ್ಲಿ ಕ್ಯಾನ್ಸರ್‌. ಮತ್ತೂಂದು ಬದಿಯಲ್ಲಿ ಬದುಕು. ಇವೆರಡರಲ್ಲಿ ಆಯ್ಕೆ ಮಾಡಿಕೊಂಡದ್ದು ಬದುಕನ್ನೇ. ಆದರೆ ಭಾರೀ ನೆರೆಯ ನೆಪದಲ್ಲಿ ಬಂದ ವಿಧಿ ತಾನೇ ಗೆಲ್ಲಲು ಹವಣಿಸಿದಾಗಲೂ ಛಲ ಬಿಡಲಿಲ್ಲ. 40 ಮಂದಿಯಲ್ಲಿ 38 ಮಂದಿಯನ್ನು ಬದುಕಿನ ದಡಕ್ಕೇ ಎಳೆದು ತಂದರು.

Advertisement

ಇದು ಚೆಂಗನ್ನೂರಿನ ಕ್ಯಾನ್ಸರ್‌ ಹಾಗೂ ಮಾನಸಿಕವಾಗಿ ಅಸ್ವಸ್ಥಕ್ಕೊಳಗಾದವರ ಆಶ್ರಮದ ಕಥೆ. ಚೆಂಗನ್ನೂರು ಪಟ್ಟಣದ ಹೆಸರು ಕಿವಿಗೆ ಬಿದ್ದ ಕೂಡಲೇ ಕೇರಳದ ನೆರೆಯ ಭೀಕರ ಪರಿಣಾಮ ನೆನಪಿಗೆ ಬರಬಹುದು. ಈ ತಿಂಗಳ ಎರಡನೇ ವಾರದಲ್ಲಿ ಸುರಿದ ಭಾರೀ ಮಳೆಗೆ ತತ್ತರಿಸಿ ಹೋದ ಪಟ್ಟಣಗಳಲ್ಲಿ ಇದೂ ಒಂದು. ಎರಡು ವಾರಗಳ ಬಳಿಕವೂ ಇನ್ನೂ ಸಹಜ ಸ್ಥಿತಿಗೆ ಮರಳುವ ಲಕ್ಷಣವಿಲ್ಲ.  ಅಲಪ್ಪುಜ ಜಿಲ್ಲೆಗೆ ಸೇರುವ ಈ ಪಟ್ಟಣದಲ್ಲಿ ಇಂದಿಗೂ ನೆರೆ ಪರಿಹಾರ ನೀಡುವ ವಾಹನಗಳದ್ದೇ ಸಂಚಾರ. ಯಾಕೆಂದರೆ ಆ ಭಾಗದಲ್ಲಿ  ಅತಿ ಹೆಚ್ಚು ಜೀವಹಾನಿ ಹಾಗೂ ಆಸ್ತಿ ಹಾನಿಗಳಾಗಿವೆ. ಹಾಗಾಗಿ ದೇಶದ ವಿವಿಧ ಮೂಲೆಗಳಿಂದ ವಿವಿಧ ಸಂಘಟನೆಗಳು ಇಲ್ಲಿಗೆ ಧಾವಿಸಿವೆ.

ಇಬ್ಬರನ್ನು ಉಳಿಸಿಕೊಳ್ಳಲಾಗಲಿಲ್ಲ 
“ನೋಡ ನೋಡುತ್ತಿದ್ದಂತೆ ಮಳೆ ನೀರು ನೆರೆಯಾಗಿ ನಮ್ಮ ಆಶ್ರಮದ ಆವರಣ ಗೋಡೆ ಸೀಳಿ ಒಳಗೆ ಬಂತು. ಮುಂದೇನೂ ಎಂದು ಯೋಚಿಸುವಷ್ಟೂ ಸಮಯ ಇರಲಿಲ್ಲ. ಆದರೂ ಜೀವದ ಹಂಗು ತೊರೆದು ಅಲ್ಲಿದ್ದ ರೋಗಿಗಳನ್ನು ಆಶ್ರಮದ ಮೇಲ್ಛಾವಣಿಗೆ ಕರೆದೊಯ್ದೆವು. ಆದರೂ ಇಬ್ಬರನ್ನು ಉಳಿಸಿಕೊಳ್ಳಲಾಗಲಿಲ್ಲ’ ಎನ್ನುತ್ತಾ ಅಳತೊಡಗುತ್ತಾರೆ ಇಲ್ಲಿಯ ಶಾಂತಿ ತೀರಂ ಕ್ಯಾನ್ಸರ್‌ ಪೀಡಿತ ಹಾಗೂ ಮಾನಸಿಕ ಅಸ್ವಸ್ಥರ ಆಶ್ರಮದ ಸಿ| ಸಹಿನೊ. 

ಆಶ್ರಮದಲ್ಲಿ ಸುಮಾರು 40 ಮಂದಿ ಅನಾಥ ಕ್ಯಾನ್ಸರ್‌ ಪೀಡಿತ ಹಾಗೂ ಮಾನಸಿಕ ಅಸ್ವಸ್ಥರಾದ 40 ವರ್ಷಕ್ಕಿಂತ ಮೇಲ್ಪಟ್ಟ  ಮಹಿಳೆಯರು ಇದ್ದರು. ಅವರ ಆರೋಗ್ಯ ಹಾಗೂ ಚಿಕಿತ್ಸೆಯನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಒಮ್ಮೆಲೆ ನುಗ್ಗಿದ ನೆರೆಗೆ ಇಬ್ಬರು ಅಸುನೀಗಿದರಲ್ಲ. ಈ ಘಟನೆಯನ್ನು ಮರೆಯಲಾಗುತ್ತಿಲ್ಲ ಎನ್ನುತ್ತಾರೆ ಅವರು.

 ವಯನಾಡು ಮೂಲದ ಲಕ್ಷ್ಮೀ 12 ವರ್ಷಗಳಿಂದ ಇಲ್ಲಿಯೇ ಇದ್ದರು. ಸಂಬಂಧಿಕರು ಯಾರೂ ಇರಲಿಲ್ಲ. ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವೀಲ್‌ಚೇರ್‌ನಲ್ಲೇ ಕುಳಿತಿದ್ದರು. ನೆರೆ ಬಂದಾಗ ಅವರನ್ನು ರಕ್ಷಿಸಬೇಕೆನ್ನುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ಇಂಥ ನೆರೆ ಕುರಿತು ಕೇಳಿಯೇ ಇರಲಿಲ್ಲ ಎನ್ನುತ್ತಾರೆ ಸಿಸ್ಟರ್‌.

Advertisement

ಇನ್ನೊಬ್ಬರು ವೆಣ್ಮಣಿಯ ಸಾರಮ್ಮ. ಎರಡು ವರ್ಷಗಳಿಂದ ಆಶ್ರಮದಲ್ಲಿದ್ದರು. ಕುಟುಂಬಸ್ಥರು ಕ್ಯಾನ್ಸರ್‌ ಇದ್ದ ಹಿನ್ನೆಲೆಯಲ್ಲಿ ಅವರನ್ನು ತೊರೆದಿದ್ದರು. ಅವರು ಮಲಗಿದ್ದಲ್ಲೇ ಇದ್ದುದರಿಂದ ರಕ್ಷಿಸಲು ಆಗಲಿಲ್ಲ. ನನ್ನ ಭುಜದ ವರೆಗೆ ನೀರು ಇತ್ತು. ನನಗೂ ವಯಸ್ಸಾಗಿದೆ. ಬೇರೆ ಯಾರ ಸಹಾಯವನ್ನೂ ಕೇಳುವಷ್ಟು ಸಮಯವೂ ಇರಲಿಲ್ಲ.  ಆಶ್ರಮದ ಮೇಲ್ಛಾವಣಿಯಲ್ಲಿ ದಿನದೂಡುವುದು ಕಷ್ಟ. ಮಾನಸಿಕ ಅಸ್ವಸ್ಥ ರೋಗಿಗಳನ್ನು ನಿಭಾಯಿಸುವುದಂತೂ ಬಹಳ ಕಷ್ಟ. ಸ್ವಲ್ಪ ಸಮಯದ ಬಳಿಕ ಮೀನುಗಾರರ ದೋಣಿಯಲ್ಲಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಬಳಿಕ ನಿಟ್ಟುಸಿರು ಬಿಟ್ಟೆವು ಎನ್ನುತ್ತಾರೆ ಅವರು.

ನಿಜಕ್ಕೂ ಪುನರ್‌ ಜನ್ಮ
ಇಲ್ಲಿ ಬದುಕಿದವರನ್ನು ಕೇಳಿದರೆ ಹೀಗೆಯೇ ಹೇಳುತ್ತಾರೆ. ಅವರ  ದುರಂತ ಕಥೆಗಳನ್ನು ಕೇಳಿದಾಗ ಈ ಮಾತು ನಿಜ ಎನ್ನಿಸದಿರದು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನೆರೆ ಎಲ್ಲವನ್ನೂ ಮುಳುಗಿಸಿದ್ದೂ ಇದೆ. ಒಬ್ಬರನ್ನು ಉಳಿಸಿಕೊಳ್ಳಲು  ಹೋಗಿ ಇನ್ನಷ್ಟು ಮಂದಿಯನ್ನು ಕಳೆದುಕೊಂಡಿದ್ದೂ ಇದೆ. ಸಾಲು ಸಾಲಾಗಿ ಜನ ಸಾಯುವಾಗ ಏನೂ ಮಾಡಲಾಗದಂಥ ಅಸಹಾಯಕ ಸ್ಥಿತಿಯೂ ನಿರ್ಮಾಣವಾಗಿದ್ದಿದೆ. ಅಂಥ ಊರಿನಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಲಾರಂಭಿಸಿದೆ. 

ಪೂರ್ಣ ಸಮಾಧಾನ ಸಾಧ್ಯವೇ?
ಚೆಂಗನ್ನೂರಿನ ಪೆರಿಸೀÕರಿ, ಪಾಂಡನಾಡಂ ಸೇರಿದಂತೆ ಬಹುತೇಕ ಭಾಗಗಳಲ್ಲಾದ ಹಾನಿ ಕಂಡರೆ ದುಃಖ ಉಮ್ಮಳಿಸಿ ಬರುತ್ತದೆ. ಕುಸಿದ ಮನೆಗಳ ಸಂಖ್ಯೆ ಎಷ್ಟೋ. ತಮ್ಮವರನ್ನು ಹಾಗೂ ತಮ್ಮದೆಲ್ಲವನ್ನೂ ಕಳೆದುಕೊಂಡ ನೋವಿನಿಂದ ಅಲ್ಲಿನ ಜನ ಇನ್ನೂ ಹೊರ ಬಂದಿಲ್ಲ.  ಸರಕಾರ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಔಷಧಿ ಕೇಂದ್ರಗಳು, ಪರಿಹಾರ ಕೇಂದ್ರಗಳು, ಅಗತ್ಯ ವಸ್ತುಗಳ ವಿತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ ಎಲ್ಲವನ್ನೂ ಕಳೆದುಕೊಂಡವರಿಗೆ ಪೂರ್ಣ ಸಮಾಧಾನ ಕೊಡಲು ಸಾಧ್ಯವೇ ಎಂಬುದು ನಿರಾಶ್ರಿತರ ಪ್ರಶ್ನೆ.

 ನೆರೆ ಆವರಿಸುತ್ತಿದ್ದಂತೆಯೇ ಎಲ್ಲರನ್ನೂ ಮೇಲ್ಛಾವಣಿಗೆ ಹರಸಾಹಸ ಪಟ್ಟು ಸಾಗಿಸಿದೆವು. ಒಂದು ದಿನದ ಬಳಿಕ ಹೇಗೋ ಮೀನುಗಾರರು ಮತ್ತಿತರರ ನೆರವಿನಿಂದ ಎಲ್ಲರನ್ನೂ ಬೇರೆಡೆಗೆ ಸಾಗಿಸಲಾಯಿತು. ವಿಪರ್ಯಾಸವೆಂದರೆ ನಾನು ಇಲ್ಲಿಯೇ ಉಳಿದೆ. ಬಳಿಕ ನೆರೆಯ ರಭಸ ಇನ್ನಷ್ಟು ಹೆಚ್ಚಾಯಿತು. ನಾನೊಬ್ಬಳೇ. ಯಾರೂ ನನ್ನ ಸಹಾಯಕ್ಕೆ ಇರಲಿಲ್ಲ. ಕೊನೆಯದಾಗಿ ಬೆಂಗಳೂರಿನಲ್ಲಿದ್ದ ನನ್ನ ಸಂಬಂಧಿಕರ ಮಗನೊಬ್ಬನಿಗೆ ಫೋನ್‌ ಮೂಲಕ ವಿಷಯ ತಿಳಿಸಿದೆ. ಅವನು ಯಾರನ್ನೋ ಸಂಪರ್ಕಿಸಿದ. ಎರಡು ದಿನಗಳ ಬಳಿಕ ನನ್ನನ್ನು ಕರೆದೊಯ್ಯಲು ಕೆಲವರು ಬಂದರು. ನಾನು ಬದುಕಿದೆ.
ಸಿಸ್ಟರ್‌ 

 ಪ್ರಜ್ಞಾ ಶೆಟ್ಟಿ,  ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next