Advertisement
ನೈಸರ್ಗಿಕ ಬಂದರು ಎನ್ನುವ ಹೆಗ್ಗಳಿಕೆಯ ಕೋಡಿಕನ್ಯಾಣದಲ್ಲಿ ಸುಮಾರು 500 ಬೋಟ್‌ಗಳು ಮೀನುಗಾರಿಕೆ ನಡೆಸುತ್ತಿದ್ದು ಈಗಾಗಲೇ 100 ಮೀಟರ್ ಮೀನುಗಾರಿಕೆ ಜಟ್ಟಿ ನಿರ್ಮಿಸಲಾಗಿದೆ. ಈ ಜಟ್ಟಿಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿದರೆ ಮಲ್ಪೆಯ ಒತ್ತಡ ಕಡಿಮೆಗೊಳಿಸಿ, ಪರ್ಯಾಯ ಬಂದರು ಸೃಷ್ಟಿಸಬಹುದು ಎನ್ನುವುದು ಇಲ್ಲಿನ ಮೀನುಗಾರರ ಕನಸಾಗಿದೆ. ಆದರೆ ಇಲ್ಲಿನ ಹೂಳಿನ ಸಮಸ್ಯೆ ಜಟ್ಟಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಮೀನುಗಾರರ ಬೇಡಿಕೆ ಮೇರೆಗೆ ಕಳೆದ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 6.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಗುತ್ತಿಗೆದಾರರು , ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದ ಇದೀಗ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.ಈ ಕುರಿತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಮಾಜಿ ಸದಸ್ಯ ಶಂಕರ್ ಕುಂದರ್ ನೇತೃತ್ವದಲ್ಲಿ ಮೀನುಗಾರರ ನಿಯೋಗ ಬೆಂಗಳೂರಿನಲ್ಲಿ ಮೀನುಗಾರಿಕೆ ಸಚಿವರನ್ನು ಇತ್ತೀಚೆಗೆ ಭೇಟಿಯಾಗಿ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದ್ದು ಇದೀಗ ಪರಿಶೀಲನೆಗೆ ಆಗಮಿಸುತ್ತಿದ್ದಾರೆ.