Advertisement

ಕೇರಳದಲ್ಲಿ ಮೀನು ಉತ್ಪಾದನೆ: 15 ಕೋಟಿ ರೂ. ಯೋಜನೆ

06:00 AM Jun 30, 2018 | |

ಕಾಸರಗೋಡು: ಸಾಕಷ್ಟು ಹಿನ್ನೀರಿನ ಸೌಕರ್ಯವಿರುವ ಕೇರಳದಲ್ಲಿ ಮೀನಿನ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸಮುದ್ರ ಮೀನು ಸಂಶೋಧನಾ ಕೇಂದ್ರ 15 ಕೋಟಿ ರೂಪಾಯಿಯ ಯೋಜನೆಯನ್ನು ಸಿದ್ಧಪಡಿಸಿದೆ. ಕೇಂದ್ರ ಕೃಷಿ ಸಚಿವಾಲಯದ ಏಜೆನ್ಸಿಯಾದ ನ್ಯಾಶನಲ್‌ ಫಿಶರೀಸ್‌ ಡೆವಲಪ್‌ಮೆಂಟ್‌ ಬೋರ್ಡ್‌(ಎನ್‌ಎಫ್‌ಡಿಬಿ)ಯ ಆರ್ಥಿಕ ನೆರವಿನೊಂದಿಗೆ 15 ಕೋಟಿ ರೂ. ಯೋಜನೆಯನ್ನು ಸಾಕಾರಗೊಳಿಸಲಿದೆ. 

Advertisement

ಇದರ ಅಂಗವಾಗಿ ಮೀನು ಕೃಷಿಕರ ಸಹಭಾಗಿತ್ವದಲ್ಲಿ ಕೇರಳದಲ್ಲಿ 500 ಮೀನು ಕೃಷಿ ಘಟಕಗಳನ್ನು ಆರಂಭಿಸಲಾಗುವುದು. ವ್ಯಯಕ್ತಿಕವಾಗಿಯೂ, ತಂಡವಾಗಿಯೂ ಮೀನು ಕೃಷಿಗೆ ಅವಕಾಶವಿದೆ. ಮೀನು ಕೃಷಿ ಮಾಡುವ ಕೃಷಿಕರಿಗೆ ಒಟ್ಟು ಮೊತ್ತದ 40 ಶೇ. ಸಬ್ಸಿಡಿ ನೀಡಲಾಗುವುದು. ಮಹಿಳೆಯರಿಗೆ ಮತ್ತು ಎಸ್‌.ಸಿ, ಎಸ್‌.ಟಿ. ವಿಭಾಗದವರಿಗೆ ಶೇ. 60 ಸಬ್ಸಿಡಿ ನೀಡಲಾಗುವುದು. ಮೀನು ಕೃಷಿಯನ್ನು ಕರಾವಳಿ ಪ್ರದೇಶದಲ್ಲಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. 

ಮನೆ ಬಳಿಯ ಕೆರೆಗಳಲ್ಲೂ ಮೀನು ಕೃಷಿ ಮಾಡಬಹುದು. ಜಲಾಶಯಗಳ ಸೌಕರ್ಯಗಳಿರುವವರಿಗೆ ಪ್ರಥಮ ಆದ್ಯತೆ ಕಲ್ಪಿಸಲಾಗಿದೆ. ಸಿ.ಎಂ.ಎಫ್‌.ಆರ್‌. ಐ.ಯ ತಾಂತ್ರಿಕತೆಯೊಂದಿಗೆ ಕೃಷಿಯನ್ನು ಮಾಡಬೇಕು. ಮೀನು ಕೃಷಿ ಮಾಡುವ ಜಲಾಶಯವನ್ನು ಸಿಎಂಎಫ್‌ಆರ್‌ಐ ಯ ತಜ್ಞರು ವೀಕ್ಷಿಸಿದ ಬಳಿಕ ಮೀನು ಕೃಷಿಗೆ ಅನುಕೂಲಕರವಾಗಿದೆ ಎಂದು ಕಂಡು ಬಂದಲ್ಲಿ ಸಿಎಂಎಫ್‌ಆರ್‌ಐಯ ಮಾರಿ ಕಲ್ಚರ್‌ ವಿಭಾಗ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಹಾಯವೊದಗಿಸುವುದು. 

ಮೀನು ಕೃಷಿ ಘಟಕ ಆರಂಭಿಸುವ ಆಸಕ್ತರಿಗೆ ಶೇ.50 ಸಬ್ಸಿಡಿ ನೀಡಲಿದ್ದು, ಕರಾವಳಿ ಪ್ರದೇಶದ ಜನರ ಜೀವನ ಮಟ್ಟವನ್ನು ಉತ್ತಮ ಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶಿಸಲಾಗಿದೆ. ಅಲ್ಲದೆ ಮೀನು ಕೃಷಿಯ ಮೂಲಕ ಯಾವುದೇ ರಾಸಾಯನಿಕ ವಸ್ತು ಬಳಸದ ಮೀನು ಲಭಿಸುವುದು. ಮೀನು ಕೃಷಿ ಮಾಡುವ ವ್ಯಕ್ತಿಗಳಿಗೆ ಸಿಎಂಎಫ್‌ಆರ್‌ಐ ತರಬೇತಿ ನೀಡಲಿದೆ. ಕೇರಳಕ್ಕೆ ಅನ್ಯ ರಾಜ್ಯಗಳಿಂದ ಬರುವ ಮೀನುಗಳಿಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. 

ಕೇರಳದಲ್ಲೇ ಮೀನು ಕೃಷಿ ಮಾಡುವುದರಿಂದ ಅನ್ಯ ರಾಜ್ಯಗಳನ್ನು ಅವಲಂಬಿಸಬೇಕಾದ ಅಗತ್ಯತೆ ಇರುವುದಿಲ್ಲ. ಅಲ್ಲದೆ ರಾಸಾಯನಿಕ ವಸ್ತುಗಳನ್ನು ಬಳಸದ ಮೀನು ಗ್ರಾಹಕರಿಗೆ ಲಭಿಸುವುದು. ಉತ್ತಮ ಗುಣ ಮಟ್ಟದ ಮೀನನ್ನು ಗ್ರಾಹಕರಿಗೆ ಒದಗಿಸುವುದು ಕೂಡ ಸಿಎಂಎಫ್‌ಆರ್‌ಐ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

Advertisement

ಆಕ್ವಾ ವನ್‌ ಲ್ಯಾಬ್‌
ಮೀನು ಕೃಷಿಕರಿಗೆ ನೆರವಾಗಲು ರಾಜ್ಯದ ಮೂರು ಕಡೆಗಳಲ್ಲಿ ಆಕ್ವಾ ವನ್‌ ಲ್ಯಾಬ್‌ಗಳನ್ನು ಆರಂಭಿಸಲಾಗುವುದು. ನೀರಿನ ಗುಣಮಟ್ಟ ಪರಿಶೀಲನೆ, ರೋಗ ನಿರ್ಣಯ ಮೊದಲಾದವುಗಳು ಈ ಅಕ್ವಾ ವನ್‌ ಲ್ಯಾಬ್‌ನಲ್ಲಿ ನಡೆಯಲಿದೆ. ಸ್ವಂತವಾಗಿಯೂ ಲ್ಯಾಬ್‌ ಆರಂಭಿಸಬಹುದಾಗಿದ್ದು, ಲ್ಯಾಬ್‌ ಆರಂಭಿಸುವವರಿಗೆ ಒಟ್ಟು ಮೊತ್ತದ 50 ಶೇಕಡಾ ಸಬ್ಸಿಡಿ ಲಭಿಸುವುದು. ಅಲ್ಲದೆ ಮೀನಿನ ಕಿರು ಆಹಾರ ಘಟಕವನ್ನು ಆರಂಭಿಸಲು ಯೋಜನೆಯಲ್ಲಿ ಅವಕಾಶವಿದೆ. 

Advertisement

Udayavani is now on Telegram. Click here to join our channel and stay updated with the latest news.

Next