ಬೆಂಗಳೂರು/ಯಲಹಂಕ: ವಾಯುನೆಲೆ ಬಳಿಯ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು 30 ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ. ಯಲಹಂಕ ವಾಯುನೆಲೆಯ ಪಾರ್ಕಿಂಗ್‌ನಲ್ಲಿ ಫೆ.23ರಂದು ಅಗ್ನಿ ದುರಂತ ಸಂಭವಿಸಿ 300 ಕಾರುಗಳು ಭಸ್ಮವಾದ ಘಟನೆ ಬೆನ್ನಲ್ಲೇ, ವಾಯುನೆಲೆ ಹಿಂಭಾಗದ ಜಾರಕಬಂಡೆ ಕಾವಲ್‌ನಲ್ಲಿ ಭಾನುವಾರ ಬೆಂಕಿ ಹೊತ್ತಿಕೊಂಡಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿವಕೋಟೆಯ ವೀರಭದ್ರಪ್ಪ ಎಂಬುವವರ ನೀಲಗಿರಿ ತೋಟದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವೇ ನಿಮಿಷಗಳಲ್ಲಿ ಜಾರಕಬಂಡೆ ಪ್ರದೇಶಕ್ಕೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ಸುಮಾರು 30 ಎಕರೆ ಪ್ರದೇಶದಲ್ಲಿ ವ್ಯಾಪಿಸಿ ಉರಿದಿದೆ.
ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಹಸಿಸೊಪ್ಪಿನ ಮೂಲಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು, 1 ಗಂಟೆ ಸತತ ಕಾರ್ಯಾಚರಣೆ ನಂತರ ಬೆಂಕಿ ನಂದಿಸಿವೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಹೊತ್ತಿದ್ದು ಹೇಗೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದರೇ ಅಥವಾ ಬೇಸಿಗೆಯಾದ್ದರಿಂದ ಬಿಸಿಲಿನ ಝಳಕ್ಕೆ ಬೆಂಕಿ ಹೊತ್ತಿಕೊಂಡಿತೇ ಎಂದು ತಿಳಿಯಬೇಕಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದರು.
ಜನವರಿಯಿಂದ 740 ಕರೆಗಳು: ಬೆಂಗಳೂರು ನಗರ ಪ್ರದೇಶದಲ್ಲಿ 2019ರ ಜನವರಿಯಿಂದ ಬೆಂಕಿ ಅವಘಡಗಳಿಗೆ ಸಂಭವಿಸಿದಂತೆ ಇದುವರೆಗೂ 740 ದೂರುಗಳು ಬಂದಿದ್ದು, ತಕ್ಷಣ ಸ್ಪಂದಿಸಿ ಬೆಂಕಿ ನಂದಿಸಲಾಗಿದೆ. ಕಳೆದ 15 ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೂ ತಂಡಗಳು ತೆರಳಿದ್ದವು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.