ಬಜಪೆ: ಕಂದಾವರ ಗ್ರಾಮ ಪಂಚಾಯತ್ ಎದುರಿನ ಫ್ಲ್ಯಾಟ್‌ನಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿದ್ದು, ಅದರಲ್ಲಿ ಸಿಲುಕಿದ್ದ 30 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೆಂಕಿ ಮತ್ತು ಹೊಗೆಗೆ ವಿದ್ಯುತ್ ಬೋರ್ಡ್‌ನಲ್ಲಿನ ಶಾರ್ಟ್ ಸರ್ಕ್ನೂಟ್ ಕಾರಣ ಎನ್ನಲಾಗಿದೆ. ರಾತ್ರಿ ಸುಮಾರು 9.45ರ ವೇಳೆ ನೆಲ ಮಹಡಿಯಲ್ಲಿ ಬೆಂಕಿ ಉಂಟಾಗಿ ದಟ್ಟವಾಗಿ ಹೊಗೆ ಮೇಲಿನ ಮಹಡಿಗೆ ಆವರಿಸಿತು. ಹೊಗೆ ತುಂಬಿದಾ ಗಲಷ್ಟೇ ಮೇಲಿದ್ದವರಿಗೆ ಘಟನೆಯ ಕುರಿತು ಗೊತ್ತಾಗಿದ್ದು, ಅವರು ಕೂಡಲೇ ನೆರವಿಗಾಗಿ ಬೊಬ್ಬೆ ಹಾಕಿದರು.
ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಯತ್ನ ಮಾಡಿದರು. ಆದರೆ ಫ್ಲ್ಯಾಟ್ ಪೂರ್ತಿ ಹೊಗೆ ಆವರಿಸಿದ್ದರಿಂದ ಅಲ್ಲಿದ್ದವರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಕೂಡಲೇ ಆಪತ್ಭಾಂಧವ ಗುರುಪುರದ ರಫೀಕ್ ಅವರನ್ನು ಕರೆಸಿ ಅವರ ಜತೆ ಸ್ಥಳೀಯರೂ ಸೇರಿ ಅಪಾಯಕ್ಕೆ ಸಿಲುಕಿದ್ದ ಎಲ್ಲ 30 ಮಂದಿಯನ್ನು ರಕ್ಷಿಸಲಾಯಿತು.
ಮೊಬೈಲ್ ಬೆಳಕಲ್ಲಿ ಕಾರ್ಯಾಚರಣೆ:
ವಿದ್ಯುತ್ ಮೀಟರ್ ಬೋರ್ಡ್ ಸುಟ್ಟಿದ್ದರಿಂದ ಫ್ಲ್ಯಾಟ್‌ನಲ್ಲಿನ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ರಾತ್ರಿಯಾಗಿದ್ದರಿಂದ ಇಡೀ ಕಾರ್ಯಾಚರಣೆಯನ್ನು ಮೊಬೈಲ್ ಬೆಳಕಿನಲ್ಲಿ ಮಾಡಲಾಯಿತು. ರೂಮ್‌ಗಳಲ್ಲಿ ಸಿಲುಕಿದ್ದವರನ್ನು ಮುಖಕ್ಕೆ ಬಟ್ಟೆ ಕಟ್ಟಿ ಹೊಗೆಯಿಂದ ಉಸಿರಾಟಕ್ಕೆ ತೊಂದರೆಯಾಗದಂತೆ ಕೆಳಗೆ ಕರೆ ತರಲಾಯಿತು. ಆದರೂ ಕೆಲವರಿಗೆ ಸ್ವಲ್ಪ ಸಮಯ ಉಸಿರಾಟದ ಸಮಸ್ಯೆ ಕಾಣಿಸಿದ್ದು, ಅನಂತರ ಚೇತರಿಸಿಕೊಂಡಿದ್ದಾರೆ. ತಡರಾತ್ರಿಯವರೆಗೂ ಫ್ಲ್ಯಾಟ್‌ನಲ್ಲಿ ಹೊಗೆ ತುಂಬಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
10 ವರ್ಷ ಹಳೆಯ ಫ್ಲ್ಯಾಟ್:
ಇದು ಸುಮಾರು 10 ವರ್ಷ ಹಳೆಯ ಫ್ಲ್ಯಾಟ್ ಆಗಿದ್ದು, 21 ಕೊಠಡಿಗಳಿವೆ. ಬೆಂಕಿ ಅನುಹಾತ ಸಂಭವಿಸುವ ವೇಳೆ ಐದಾರು ರೂಮ್‌ಗಳಲ್ಲಿ ಮಾತ್ರವೇ ಜನರಿದ್ದರು.
ಕೃಷ್ಣಾಪುರ: ಫ್ಲ್ಯಾಟ್‌ನಲ್ಲಿ ಅಗ್ನಿ ಅನಾಹುತ
ಸುರತ್ಕಲ್: ಕೃಷ್ಣಾಪುರ ಬಳಿಯ ವಸತಿ ಸಮುಚ್ಚಯದ ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆ ಬುಧವಾರ ರಾತ್ರಿ 10.30ರ ವೇಳೆ ಸಂಭವಿಸಿದೆ.
ಫ್ಲ್ಯಾಟ್‌ನ 25ಕ್ಕೂ ಅಧಿಕ ಮನೆಯಲ್ಲಿದ್ದವ ರೆಲ್ಲರನ್ನೂ ಕೂಡಲೇ ಹೊರಗೆ ಕರೆ ತರಲಾಯಿತು. ಮೆಸ್ಕಾಂ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ.