ಬೆಂಗಳೂರು: ಪ್ರಜಾಕೀಯ ದಿನ ಎಂಬ ಹೆಸರಲ್ಲಿ ಶನಿವಾರ ಮಧ್ಯಾಹ್ನ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಪುಟದಲ್ಲಿ ನೇರಪ್ರಸಾರದಲ್ಲಿ ಮಾತನಾಡುವ ವೇಳೆ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಈ ಕುರಿತು ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಕೆ ಎನ್ ಅವರು ದೂರು ದಾಖಲಿಸಿದ್ದು, SC ST ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಉಪೇಂದ್ರ ಅವರಿಗೆ ನೋಟಿಸ್ ನೀಡಿ ಹೇಳಿಕೆ ಪರಿಶೀಲನೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉಪ್ಪಿ ಕ್ಷಮೆ, ಪ್ರತಿಕ್ರಿಯೆ
ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟ ಉಪೇಂದ್ರ ಅವರು ಕ್ಷಮೆ ಯಾಚಿಸಿದ್ದಾರೆ. ಎಕ್ಸ್ ನಲ್ಲಿ ಟೀಕಾಕಾರಿಗೂ ಪ್ರತಿಕ್ರಿಯಿಸಿದ್ದು, ”ಇಂದು ನನ್ನ ವಿರುದ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ.50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ.ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ… ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ ? ನನಗೆ ಹುಚ್ಚೇ ? ಅದಕ್ಕೆ ಕಾರಣವಾದರೂ ಏನು ? ಅದರಿಂದ ನನಗೆ ಸಿಗುವ ಲಾಭವಾದರೂ ಏನು ? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ಯಾಕೆ ಇಷ್ಟೊಂದು ದ್ವೇಷ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೇಳಿಕೆಯನ್ನು ಖಂಡಿಸಿ ರಾಜ್ಯದ ವಿವಿಧೆಡೆ ದಲಿತಪರ, ಇತರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ.